Site icon Vistara News

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Pro Kabaddi

ಅಹಮದಾಬಾದ್​: ಗುರುವಾರದ ಅತ್ಯಂತ ಜಿದ್ದಾಜಿದ್ದಿನ ಪ್ರೊ ಕಬಡ್ಡಿ ಲೀಗ್‌(Pro Kabaddi) ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡ ಆತಿಥೇಯ ಗುಜರಾತ್​ ಜೈಂಟ್ಸ್​ ತಂಡವನ್ನು 33-30 ಅಂಕದ ಅಂತರದಿಂದ ಮಣಿಸಿ ರೋಚಕ ಗೆಲುವು ಕಂಡಿದೆ. ಬೆಂಗಾಲ್​ ವಾರಿಯರ್ಸ್​ ಮತ್ತು ಜೈಪುರ ಪಿಂಕ್​ ಪ್ಯಾಂಥರ್ಸ್​ ನಡುವಣ ಪಂದ್ಯ 28-28 ಅಂಕದೊಂದಿಗೆ ಟೈಗೊಂಡಿತು.

ಗುಜರಾತ್​ಗೆ ಮೊದಲ ಸೋಲು

ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಜೇಯ ಓಟ ಕಾಯ್ದುಕೊಂಡಿದ್ದ ಗುಜರಾತ್​ ಜೈಂಟ್ಸ್ ತಂಡ ಈ ಅಬ್ಬರಕ್ಕೆ ಬ್ರೇಕ್​ ಹಾಕುವಲ್ಲಿ ಪಾಟ್ನಾ ಪೈರೇಟ್ಸ್‌ ಯಶಸ್ಸು ಕಂಡಿತು. ಪಾಟ್ನಾ ಪೈರೇಟ್ಸ್‌ ಆಡಿದ 2 ಪಂದ್ಯಗಳಲ್ಲಿಯೂ ಗೆದ್ದು ಈಗ ಅಜೇಯ ಓಟ ಮುಂದುವರಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 10 ಅಂಕದೊಂದಿಗೆ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಸೋಲು ಕಂಡ ಗುಜರಾತ್​ 16 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಪಾಟ್ನಾ ವಿರುದ್ಧ 5ಕ್ಕಿಂತ ಕಡಿಮೆ ಅಂಕದ ಅಂತರದಿಂದ ಸೋಲು ಕಂಡ ಕಾರಣ ಒಂದು ಅಂಕ ಲಭಿಸಿದೆ.

ಇದನ್ನೂ ಓದಿ Pro Kabaddi: ಗೆಲುವಿನ ನಗೆ ಬೀರಿದ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್

ಎಡವಿದ ಫಜಲ್ ಅತ್ರಾಚಲಿ

ಗುಜರಾತ್​ ನಾಯಕ ಫಜಲ್ ಅತ್ರಾಚಲಿ ಅವರು ಡಿಫೆಂಡಿಂಗ್​ನಲ್ಲಿ ಅನುಭವಿಸಿದ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಹಿಂದಿನ ಮೂರು ಪಂದ್ಯಗಳಲ್ಲಿ ಅವರು ಅದ್ಭುತ ಕ್ಯಾಚಿಂಗ್​ ಮೂಲಕ ಎದುರಾಳಿ ರೇಡರ್​ಗಳನ್ನು ಕಟ್ಟಿ ಹಾಕಿದ್ದರು. ಆದರೆ ಈ ಪಂದ್ಯದಲ್ಲಿ ಅವರ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಸೌರವ್​ ಗುಲಿಯಾ ಡಿಫೆಂಡಿಂಗ್​ನಲ್ಲಿ 4 ಅಂಕ ಪಡೆದರೂ ಕೂಡ ಗ್ರೀನ್​ ಮತ್ತು ಹಳದಿ ಕಾರ್ಡ್​ ಪಡೆದು ಕೆಲ ಕಾಲ ಮ್ಯಾಟ್​ನಿಂದ ಹೊರಗುಳಿಯಬೇಕಾಯಿತು. ಇದು ಕೂಡ ತಂಡದ ಹಿನ್ನಡೆಗೆ ಕಾರಣವಾಯಿತು. ರೇಡರ್​ ರಾಕೇಶ್​ 11 ಅಂಕ ಗಳಿಸಿ ತಂಡದ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು.

ಪಾಟ್ನಾ ಪರ ಕಳೆದ ಪಂದ್ಯದಲ್ಲಿ ಮಿಂಚಿನ ರೇಡಿಂಗ್​ ನಡೆಸಿದ ಸಚಿನ್​ ಅವರ ಆಟ ಈ ಪಂದ್ಯದಲ್ಲಿ ಕೊಂಚ ಮಂಕಾಗಿತ್ತು. ಕೇವಲ 4 ಅಂಕಕ್ಕೆ ಮಾತ್ರ ಸೀಮಿತರಾದರು. ಬುಧವಾರದ ಪಂದ್ಯದಲ್ಲಿ 14 ಅಂಕ ಗಳಿಸಿದ್ದರು. ಸುಧಾಕರ್​ ಅವರು ರೇಡಿಂಗ್​ನಲ್ಲಿ (5) ಮತ್ತು ನಾಯಕ ನೀರಜ್​ ಕುಮಾರ್​ ಡಿಫೆಂಡಿಂಗ್​ನಲ್ಲಿ (4), ಅಂಕಿತ್​ (4) ಸಂಘಟಿತ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಗೆಲ್ಲುವ ಅವಕಾಶ ಕಳೆದುಕೊಂಡ ಬೆಂಗಾಲ್​

ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ಜೈಪುರ ಪಿಂಕ್​ ಪ್ಯಾಂಥರ್ಸ್​​ ವಿರುದ್ಧ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಟೈ ಆಗುವಂತೆ ಮಾಡಿತು. ಪಂದ್ಯದ ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಾಲ್​ ಇನ್ನೇನು ಪಂದ್ಯ ಮುಗಿಯಲು ಒಂದು ನಿಮಿಷ ಬಾಕಿ ಇರುವಾಗ ಇಬ್ಬರು ಆಟಗಾರರು ಟ್ಯಾಕಲ್​​ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಬ್ಯಾಕ್​ ಲೈನ್​ ಮೆಟ್ಟಿ ಸೆಲ್ಫ್​ ಔಟ್​ ಆಗುವ ಮೂಲಕ ಎದುರಾಳಿ ತಂಡಕ್ಕೆ ಅನಗತ್ಯವಾಗಿ 2 ಅಂಕ ಬಿಟ್ಟುಕೊಟ್ಟರು. ಇದು ಜೈಪುರ ತಂಡಕ್ಕೆ ವರದಾನವಾಯಿತು. ಇದೇ ಅಂಕವನ್ನು ಬಳಸಿಕೊಂಡು ಸೋಲಿನ ದಡವೆಯಿಂದ ಪಾರಾಗಿ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ಸು ಸಾಧಿಸಿತು.

Exit mobile version