ಬೆಂಗಳೂರು: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi)ನ ಆಟಗಾರರ ಹರಾಜು ಪ್ರಕ್ರಿಯೆಯ ದಿನಾಂಕ ಈಗಾಗಲೇ ಙ್ರಕಟಗೊಂಡಿದ್ದು ಈ ಮಹತ್ವದ ಟೂರ್ನಿಯ ಆಟಗಾರರ ಹರಾಜು(pro kabaddi league 2023 auction date) ಸೆಪ್ಟೆಂಬರ್ 8 ರಿಂದ 9 ರವರೆಗೆ ಮುಂಬೈಯಲ್ಲಿ ನಡೆಯಲಿದೆ. ಸೋಮವಾರ ಎಲ್ಲ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿತ್ತು. ಒಟ್ಟಾರೆ ಇರುವ 12 ತಂಡಗಳು ಮೂರು ವಿಭಾಗಗಳಲ್ಲಿ ಒಟ್ಟು 84 ಆಟಗಾರರನ್ನು ಉಳಿಸಿಕೊಂಡಿವೆ. ಸ್ಟಾರ್ ಆಟಗಾರ ಪವನ್ ಸೆಹ್ರಾವತ್(pawan sehrawat) ಮತ್ತು ವಿಕಾಸ್ ಕಂಡೋಲಾ ಅವರನ್ನು ಬಿಡುಗಡೆ ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಪವನ್ ಸೆಹ್ರಾವತ್ ಅವರು ಮತ್ತೆ ಬೆಂಗಳೂರು ಬುಲ್ಸ್(bengaluru bulls) ತಂಡ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದುಬಾರಿ ಆಟಗಾರ
ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಪವನ್ ಸೆಹ್ರಾವತ್ ಅವರನ್ನು 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ತಮಿಳ್ ತಲೈವಾಸ್ ಫ್ರಾಂಚೈಸಿಯು ಬರೋಬ್ಬರಿ 2.23 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಪವನ್ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಗುಜರಾತ್ ಜೈಂಟ್ಸ್ ಎದುರಿನ ಮೊದಲ ಪಂದ್ಯದಲ್ಲಿಯೇ ಎದುರಾಳಿ ತಂಡದ ಚಂದ್ರನ್ ರಂಜಿತ್ ಅವರನ್ನು ಟ್ಯಾಕಲ್ ಮಾಡುವ ಬರದಲ್ಲಿ ಗಾಯಕ್ಕೆ ತುತ್ತಾಗಿ ಕೂಟದಿಂದ ಹೊರಬಿದ್ದಿದ್ದರು. 10ನೇ ಆವೃತ್ತಿಗೆ ರಿಟೈಟ್ ಮಾಡದ ಕಾರಣ ಅವರು ಕೂಡ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಮತ್ತೆ ಬುಲ್ಸ್ ತಂಡಕ್ಕೆ ಸೇರ್ಪಡೆಗೊಳಿಸುವ ಎಲ್ಲ ಪ್ರಯತ್ನವನ್ನು ತಂಡದ ಕೋಚ್ ರಣಧೀರ್ ಸಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಣ್ಣೀರು ಹಾಕಿದ್ದ ರಣಧೀರ್ ಸಿಂಗ್
ಪವನ್ ಸೆಹ್ರಾವತ್ ಅವರು ಬೆಂಗಳೂರು ತಂಡದಿಂದ ಬೇರ್ಪಟ್ಟ ಸಂದರ್ಭದಲ್ಲಿ ಕೋಚ್ ರಣಧೀರ್ ಸಿಂಗ್ ಅವರು ಕಣ್ಣೀರು ಹಾಕಿದ್ದರು. ನೆಚ್ಚಿನ ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ಹೊರಹಾಕಿದ್ದರು. ಇದೀಗ ಈ ಬಾರಿ ಹರಾಜಿನಲ್ಲಿ ಅವರನ್ನು ಎಷ್ಟೇ ಮೊತ್ತವನ್ನು ನೀಡಿಯಾದರೂ ತಂಡಕ್ಕೆ ವಾಪಸ್ ಕರೆತರುವ ಯತ್ನದಲ್ಲಿದ್ದಾರೆ. ಇದಲ್ಲದೆ ಪವನ್ ಬುಲ್ಸ್ ತಂಡದಿಂದ ಹೊರಹೋದಾಗ ಅಭಿಮಾನಿಗಳು ಕೂಡ ಬೇಸರಗೊಂಡಿದ್ದರು. ಇದೀಗ ಅವರ ರೀ ಎಂಟ್ರಿಗೆ ಮತ್ತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು ತಮ್ಮ ನೆಚ್ಚಿನ ಆಟಗಾರ ಮತ್ತೆ ತಂಡ ಸೇರಲಿ ಎನ್ನುವುದು ಎಲ್ಲರ ಆಶಯವಾಗಿದೆ. ಕಳೆದ ತಿಂಗಳು ನಡೆದಿದ್ದ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಮುನ್ನಡೆ ತಂಡವನ್ನು ಚಾಂಪಿಯನ್ ಆಗಿ ಹೊರಮೊಮ್ಮಿಸಿದ್ದರು.
ಬುಲ್ಸ್ ಚೊಚ್ಚಲ ಟ್ರೋಫಿ ಗೆದ್ದಿದ್ದೇ ಪವನ್ ಸಾಹಸದಿಂದ
ಆರನೇ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗುವ ಮೂಲಕ ಗೆದ್ದು ಬೀಗಿತ್ತು. ಬುಲ್ಸ್ ತಂಡ ಈ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇದೇ ಪವನ್. ಈ ಆವೃತ್ತಿಯಲ್ಲಿ ತಮ್ಮ ಅಮೋಘ ಆಟದ ಮೂಲಕ ಹೈ ಫ್ಲೈಯರ್ ಎಂಬ ಬಿರುದು ಪಡೆದ ಅವರು ಮೊಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಗೂ ಭಾಜನರಾಗಿದ್ದರು.
“ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು ಈ ಟೂರ್ನಿಯ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಲಿದೆ. 12 ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ವಿಶ್ವದ ಬಲಿಷ್ಠ ಕಬಡ್ಡಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ತೀವ್ರ ಪೈಪೋಟಿ ನಡೆಸಬಹುದು” ಎಂದು ಪ್ರೊ ಕಬಡ್ಡಿ ಲೀಗ್‌ನ ಮಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.
ಕಳೆದ ಬಾರಿ ಜೈಪುರ ಚಾಂಪಿಯನ್
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ (Pro Kabaddi League) ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಪುಣೇರಿ ಪಲ್ಟನ್ ವಿರುದ್ಧ 33-29 ಅಂಕಗಳ ಅಂತರದ ವಿಜಯ ಸಾಧಿಸಿ ಎರಡನೇ ಬಾರಿಗೆ ಟ್ರೋಫಿ ಗೆದ್ದಿತ್ತು. 2014ರ ಉದ್ಘಾಟನಾ ಆವೃತ್ತಿಯಲ್ಲೂ ಪಿಂಕ್ ಪ್ಯಾಂಥರ್ಸ್ ಪ್ರಶಸ್ತಿ ಗೆದ್ದಿತ್ತು. ಈ ಜಿದ್ದಾಜಿದ್ದಿನ ಫೈನಲ್ ಪಂದ್ಯವನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕರಾದ ಅಭಿಷೇಕ್ ಬಚ್ಚನ್. ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ವೀಕ್ಷಿಸಿದ್ದರು. ಜತೆಗೆ ಬಾಲಿವುಡ್ ನಟ ರಣವೀರ್ ಸಿಂಗ್, ನಟಿ ಪೂಜಾ ಹೆಗ್ಡೆ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಹಾಜರಿದ್ದರು.