ಬೆಂಗಳೂರು: ಕಬಡ್ಡಿ ಪ್ರೇಮಿಗಳಿಗೆ ಹುಚ್ಚೆಬ್ಬಿಸಿದ್ದ ಪ್ರೊ ಕಬಡ್ಡಿ 9ನೇ ಆವೃತ್ತಿಗೆ ತೆರೆ ಬೀಳುವ ಸಮಯ ಹತ್ತಿರವಾಗಿದೆ. ಗುರುವಾರ ಮೊದಲ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾದರೆ ದ್ವಿತೀಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮತ್ತು ತಮಿಳ್ ತಲೈವಾಸ್ ಸೆಣಸಾಡಲಿವೆ.
ಕಳೆದ ಎಲಿಮಿನೇಟರ್ ಕಾದಾಟದಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ವಿರುದ್ಧ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್ಗೇರಿದ ಬುಲ್ಸ್ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಬುಲ್ಸ್ ಭರತ್ ರೈಡಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡಿಫೆನ್ಸ್ ನಲ್ಲಿ ಸೌರಭ್ ನಂದಲ್ ಮತ್ತು ಅಮನ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ದುಬಾರಿ ಆಟಗಾರ ವಿಕಾಸ್ ಕಂಡೋಲ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಇರುವುದು ಚಿಂತಿಸಬೇಕಾದ ಸಂಗತಿಯಾಗಿದೆ. ಜತೆಗೆ ಕಪ್ತಾನ ಮಹೇಂದರ್ ಸಿಂಗ್ ನಾಯಕನ ಆಟವಾಡಬೇಕು. ಇವರೆಲ್ಲರಿಂದಲೂ ಉತ್ತಮ ಪ್ರದರ್ಶನ ಬಂದಲ್ಲಿ ಬೆಂಗಳೂರು ಬುಲ್ಸ್ ಈ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿವುದರಲ್ಲಿ ಯಾವುದೇ ಅನುಮಾನವಿಲ್ಲ.
ಜೈಪುರ್ ಸಮರ್ಥ ತಂಡ
ಆರಂಭದಿಂದಲೂ ಸಾಂಘಿಕ ಪ್ರದರ್ಶನ ನೀಡುತ್ತಾ ಬಂದಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ 82 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್ಗೆ ನೆದಿತ್ತು. ರೈಡಿಂಗ್‌ನಲ್ಲಿ ಅರ್ಜುನ್ ದೇಶ್ವಾಲ್ (286 ಅಂಕ) ತಂಡದ ಬಲವಾಗಿದ್ದರೆ, ಡಿಫೆನ್ಸ್ ನಲ್ಲಿ ಅಂಕುಶ್ ಮತ್ತು ನಾಯಕ ಸುನೀಲ್ ಕುಮಾರ್ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರದಾನವಾಗಿದೆ.
ಪುಣೇರಿ VS ತಲೈವಾಸ್
ಮತ್ತೊಂದೆಡೆ ಗುರುವಾರ 2ನೇ ಸೆಮಿಫೈನಲ್‌ನಲ್ಲಿ ಪುಣೇರಿ ಪಲ್ಟಾನ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿವೆ. ಗುಂಪಿನಲ್ಲಿ 2ನೇ ಸ್ಥಾನಿಯಾಗಿದ್ದ ಪುಣೇರಿ ನೇರವಾಗಿ ಸೆಮೀಸ್‌ಗೇರಿದ್ದರೆ, ತಲೈವಾಸ್ 2ನೇ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್ ವಿರುದ್ಧ ಟೈ ಬ್ರೇಕರ್‌ನಲ್ಲಿ ರೋಚಕವಾಗಿ ಗೆದ್ದು ಅಂತಿಮ 4ರ ಘಟ್ಟ ಪ್ರವೇಶಿಸಿತು.
ಹೈ ಪ್ಲೈಯರ್ ಪವನ್ ಸೆಹ್ರಾವತ್ ಮೊದಲ ಪಂದ್ಯದಲ್ಲಿಯೇ ಗಾಯಾಳಾಗಿ ಕೂಟದಿಂದಲೇ ನಿರ್ಗಮಿಸಿದ ಕಾರಣ ತಮಿಳ್ ತಂಡ ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಬಳಿಕ ರೈಡರ್ ನರೇಂದರ್, ಡಿಫೆಂಡರ್ ಸಾಗರ್ ಅವರ ಉತ್ತಮ ಪ್ರದರ್ಶನ ಹಾಗೂ ತಂಡದ ಸದಸ್ಯರ ಸಾಂಘಿಕ ಪ್ರದರ್ಶನದ ಮೂಲಕ ಸೆಮಿಫೈನಲ್ಗೇರಿದ ಸಾಹಸ ಮೆಚ್ಚಲೇ ಬೇಕು ಯುವಕರೇ ತುಂಬಿರುವ ತಂಡದಲ್ಲಿ ಅನುಭವದ ಕೊರತೆಯಿದ್ದರೂ ಸಾಮರ್ಥ್ಯಕ್ಕೆ ಕೊರತೆಯಿಲ್ಲ ಇದೀಗ ಪುಣೆಯನ್ನು ಮಣಿಸಿ ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ | Pro Kabaddi League | ಹಾಲಿ ಚಾಂಪಿಯನ್ ಡೆಲ್ಲಿ ಮಣಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್