Site icon Vistara News

Pro Kabaddi: ತವರಿನಲ್ಲೇ ಹೀನಾಯ ಸೋಲು ಕಂಡ ತಮಿಳ್​ ತಲೈವಾಸ್​

Pro Kabaddi League

ಚೆನ್ನೈ: ಸೋಮವಾರದ ಪ್ರೊ ಕಬಡ್ಡಿ ಲೀಗ್​ನ ಡಬಲ್​ ಹೆಡರ್​ನ ದ್ವಿತೀಯ ಪಂದ್ಯದಲ್ಲಿ ಗೆಲುವಿನ ಇರಾದೆಯೊಂದಿಗೆ ತವರಿನ ಅಂಗಳದಲ್ಲಿ ಆಡಲಿಳಿದ ತಮಿಳ್​ ತಲೈವಾಸ್​ಗೆ(Tamil Thalaivas) ಹರ್ಯಾಣ ಸ್ಟೀಲರ್(Haryana Steelers) ಸೋಲಿನ ಏಟು ನೀಡಿದೆ. ಅದು ಕೂಡ ಬೃಹತ್​ ಅಂತರದಿಂದ.

ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ ಅಮೋಘ ಆಟ ಪ್ರದರ್ಶಿಸಿತು. ಫುಲ್ ಜೋಶ್​ನಿಂದಲೇ ಆಡುವ ಮೂಲಕ 42-29 ಅಂಕಗಳಿಂದ ಎದುರಾಳಿ ತಮಿಳ್​ ತಂಡವನ್ನು ಮಣಿಸಿತು. ಗೆಲುವಿನ ಅಂತರ 13 ಅಂಕ. ಹರ್ಯಾಣ ಸ್ಟೀಲರ್ ಪರ ಮಿಂಚಿದ್ದು ಬದಲಿ ಆಟಗಾರನಾಗಿ ಕಣಕ್ಕಿಳಿದ ಶಿವಂ ಪತಾರೆ. 9 ರೇಡಿಂಗ್​ ನಡೆಸಿ 8 ಅಂಕಗಳಿಸಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಉಳಿದಂತೆ ಜೈದೀಪ್(7), ವಿನಯ್​(5), ರಾಹುಲ್​(7)ಮತ್ತು ಮೋಹಿತ್​ (3) ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ಸಲ್ಲಿಸಿದರು. ಆದರೆ ಬಾಹುಬಲಿ ಖ್ಯಾತಿಯ ಸ್ಟಾರ್​ ರೇಡರ್​ ಸಿದ್ದಾರ್ಥ್ ಒಂದಂಕಕ್ಕೆ ಸೀಮಿತರಾದರು.

​ತಮಿಳ್​ ಪರ ಮಿಂಚಿದ ಆಟಗಾರರೆಂದರೆ ಶಾಹೀಲ್​ ಗುಲಿಯಾ(10), ಹಿಮಾಂಶು(9) ಮತ್ತು ನಾಯಕ ಸಾಗರ್​(4). ಅಜಿಂಕ್ಯಾ ಪವಾರ್​ ಅವರು ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು ತಮಿಳ್​ ತಲೈವಾಸ್​ಗೆ ಬಾರಿ ಹಿನ್ನೆಡೆಯಾಗಿ ಪರಿಣಮಿಸಿತು.

ಇದನ್ನೂ ಓದಿ Pro Kabaddi: ಟೈಟಾನ್ಸ್​ ಮುಳುಗಿಸಿ ಗೆಲುವಿನ ಹಳಿ ಏರಿದ ಬುಲ್ಸ್​

ಸತತ 2ನೇ ಸೋಲು ಕಂಡ ಬೆಂಗಾಲ್​ ವಾರಿಯರ್ಸ್

ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ದಬಾಂಗ್​ ಡೆಲ್ಲಿ(Dabang Delhi K.C) ವಿರುದ್ಧ 38-29 ಅಂಕಗಳಿಂದ ಸೋಲು ಕಂಡಿತು. ಭಾನುವಾರದ ಪಂದ್ಯದಲ್ಲಿ ಸೋಲು ಕಂಡಿದ್ದ ಬೆಂಗಾಲ್​ ವಾರಿಯರ್ಸ್(Bengal Warriors)ಗೆ ಇದು ಸತತ ಎರಡನೇ ಸೋಲಾಗಿದೆ.

ಈ ಪಂದ್ಯದಲ್ಲಿ ಬೆಂಗಾಲ್​ ತಂಡ ಎಲ್ಲ ವಿಭಾಗದಲ್ಲಿಯೂ ವೈಫಲ್ಯ ಕಂಡಿತು. ನಾಯಕ ಮತ್ತು ಸ್ಟಾರ್​ ಆಟಗಾರ ಮಣೀಂದರ್​ ಸಿಂಗ್​ ಒಟ್ಟು 13 ರೇಡ್​ ನಡೆಸಿ ಗಳಿಸಿದ್ದು ಕೇವಲ 6 ಅಂಕ. ಇವರ ಈ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣ. ಕಳೆದ ಪಂದ್ಯದಲ್ಲಿಯೂ ಕೂಡ ಅವರು ಅತಿ ಬುದ್ಧಿವಂತಿಕೆ ತೋರಲು ಮುಂದಾಗಿ ಪಂದ್ಯವನ್ನು ಸೋಲಿಗೆ ಸೋಲಿನ ಸುಳಿಗೆ ತಳ್ಳಿದ್ದರು.

ಬೆಂಗಾಲ್​ ಪರ ಇಂದಿನ ಪಂದ್ಯದಲ್ಲಿ ಮಿಂಚಿದ್ದು ಯುವ ಆಟಗಾರ ನಿತೀನ್​ ಕುಮಾರ್​. ಅವರು 14 ರೇಡ್​ ನಡೆಸಿ 9 ಅಂಕ ಗಳಿಸಿದರು. ಇವರದ್ದೇ ತಂಡದ ಗರಿಷ್ಠ ಗಳಿಕೆ. ಇವರನ್ನು ಹೊರತುಪಡಿಸಿ ವೈಭವ್​ ಮತ್ತಯ ಶುಭಂ ತಲಾ 4 ಅಂಕ ಗಳಿಸಿದರು. ಶ್ರೀಕಾಂತ್​ ಜಾಧವ್​ 3 ಅಂಕ ಕಲೆಹಾಕಿದರು.

ಮಿಂಚಿದ ನವೀನ್​

ಎಕ್ಸ್​ಪ್ರೆಸ್​ ವೇಗದಲ್ಲಿ ರೇಡಿಂಗ್​ ಮಾಡುವ ಡೆಲ್ಲಿ ತಂಡದ ರೇಡರ್​ ನವೀನ್​ ಕುಮಾರ್​ ಅವರು ಗಾಯದ ಮಧ್ಯೆಯೂ ಮಿಂಚಿನ ರೇಡಿಂಗ್​ ನಡೆಸಿ 11 ಅಂಕ ಕಲೆಹಾಕಿದರು. ದ್ವಿತೀಯಾರ್ಧದ ಆಟದ ವೇಳೆ ಗಾಯದಿಂದಾಗಿ ಕೆಲ ಕಾಲ ಮ್ಯಾಟ್​ನಿಂದ ಹೊರಗಿದ್ದ ಅವರು ಮತ್ತೆ ಮರಳಿ ಶರವೇಗದ ರೇಡಿಂಗ್​ ನಡೆಸಿ ಗಮನ ಸೆಳೆದರು. ಇದೇ ವೇಳೆ ಪ್ರೋ ಕಬಡ್ಡಿ ಲೀಗ್​ನಲ್ಲಿ 1 ಸಾವಿರ ರೇಡ್ ಅಂಕಗಳನ್ನು ಪೂರ್ತಿಗೊಳಿಸಿದರು.

Exit mobile version