ನವದೆಹಲಿ: ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್(Dipa Karmakar) ನಿಷೇಧಿತ ವಸ್ತು ಬಳಸಿರುವುದು ಸಾಬೀತಾದ ಕಾರಣ ಅವರಿಗೆ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ITA) 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.
ದೀಪಾ ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್(S3. ಬೀಟಾ-2 ಅಗೊನಿಸ್ಟ್) ಸೇವಿಸಿರುವುದು ಡೋಪಿಂಗ್ ಟೆಸ್ಟ್‌ನಲ್ಲಿ ಸಾಬೀತಾಗಿದೆ. ಹೀಗಾಗಿ ಅವರಿಗೆ 21 ತಿಂಗಳ ಕಾಲ ಅಮಾನತು ಮಾಡಲಾಗಿದೆ. 2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಗೊಂಡಿದೆ. ಜತೆಗೆ ಅಕ್ಟೋಬರ್ 11, 2021ರಂದು ದೀಪಾ ಕರ್ಮಾಕರ್ ಪಾಲ್ಗೊಂಡ ಎಲ್ಲ ಕ್ರೀಡೆ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.
2021ರ ಅಕ್ಟೋಬರ್‌ನಿಂದ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದೀಪಾ ಕರ್ಮಾಕರ್‌ಗೆ ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಭಾಗವನ್ನು ದೀಪಾ ಕರ್ಮಾಕರ್ ಈಗಾಗಲೇ ಪೂರೈಸಿದ್ದಾರೆ. 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈ 10ಕ್ಕೆ ಅಂತ್ಯಗೊಳ್ಳಲಿದೆ.
ಇದನ್ನೂ ಓದಿ Dutee Chand | ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪ; ದ್ಯುತಿ ಚಂದ್ ಅಮಾನತು
ಭಾರತದ ಮೊದಲ ಜಿಮ್ನಾಸ್ಟ್
2016ರ ರಿಯೋ ಒಲಿಂಪಿಕ್ಸ್‌ನಲ್ಲಿ(rio olympics) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ದೀಪಾ ಕರ್ಮಾಕರ್ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ಅವರು ಕೇವಲ 0.15 ಅಂಕಗಳಿಂದ ಪದಕವೊಂದನ್ನು ಕಳೆದುಕೊಂಡಿದ್ದರು. 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ(2014 Commonwealth Games) ಕಂಚಿನ ಪದಕ. 2018ರಲ್ಲಿ ನಡೆದ ಮೆರಿಸಿನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು. ಈ ಮೂಲಕ ಜಿಮ್ನಾಸ್ಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಸಾಧನೆಯನ್ನು ಮೆರೆದಿದ್ದರು.