ನವದೆಹಲಿ: ಬಿಜೆಪಿ ಸಂಸದ, ಭಾರತ ಕುಸ್ತಿ ಒಕ್ಕೂಟದ(WFI) ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಲೈಂಗಿಕ ಆರೋಪ ಹೊರಿಸಿ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು(Protesting wrestlers), ಸದ್ಯ ಈ ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದು ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯಲು ಅಭ್ಯಾಸ ನಿರತರಾಗಿದ್ದಾರೆ. ಇದೀಗ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರಮುಖ 6 ಆರು ಮಂದಿ ಕುಸ್ತಿಪಟುಗಳಿಗೆ ಮುಂಬರುವ ಏಷ್ಯನ್ ಗೇಮ್ಸ್(Asian Games) ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಲು ಟ್ರಯಲ್ಸ್ ಪಂದ್ಯವೊಂದನ್ನು ಗೆಲ್ಲಬೇಕಾದ ಸವಾಲು ಎದುರಾಗಿದೆ.
ಭಾರತ ಒಲಿಂಪಿಕ್ ಸಂಸ್ಥೆಯ ಅಡ್‌ಹಾಕ್ ಸಮಿತಿ ಕೈಗೊಂಡ ಕ್ರಮದಂತೆ, ಈ ಕುಸ್ತಿಪಟುಗಳು ಟ್ರಯಲ್ಸ್ ವಿಜೇತರ ವಿರುದ್ಧ ಗೆದ್ದರೆ ಈ ಎರಡು ಪ್ರತಿಷ್ಠಿತ ಕೂಟಗಳಿಗೆ ಆಯ್ಕೆಯಾಗಬಹುದು ಎಂದು ತಿಳಿಸಿದೆ. ವಿನೇಶ್ ಫೋಗಟ್(Vinesh Phogat), ಬಜರಂಗ್ ಪೂನಿಯಾ(Bajrang Punia), ಸಾಕ್ಷಿ ಮಲಿಕ್(Sakshi Malik), ಸಂಗೀತಾ ಫೋಗಟ್(Sangeeta Phogat), ಸತ್ಯವ್ರತ ಕಾದಿಯಾನ್(Satyawart Kadian) ಮತ್ತು ಜಿತೇಂದರ್ ಕಿನ್ಹಾ(Jitender Kumar) ಅವರಿಗೆ ಪೂರ್ವಭಾವಿ ಟ್ರಯಲ್ಸ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಆಗಸ್ಟ್ 5 ರಿಂದ 15ರ ನಡುವೆ ನಡೆಯುವ ಟ್ರಯಲ್ಸ್‌ನಲ್ಲಿ ಆಯಾ ತೂಕ ವಿಭಾಗದ ವಿಜೇತರ ಎದುರು ಈ ಕುಸ್ತಿಪಟುಗಳು ಹೋರಾಟ ನಡೆಸಿದರಷ್ಟೇ ಸಾಕು ಎಂದು ಈ ಕುಸ್ತಿಪಟುಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಭರವಸೆ ನೀಡಿದೆ.
ಸರಿ ಸುಮಾರು 3 ತಿಂಗಳುಗಳ ಕಾಲ ಪ್ರತಿಭಟನೆಯ ಹಿಂದೆ ಬಿದ್ದಿದ್ದ ಈ ಕುಸ್ತಿಪಟುಗಳು ಯಾವುದೇ ಅಭ್ಯಾಸ ಮತ್ತು ಕುಸ್ತಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಆಗಸ್ಟ್‌ನಲ್ಲಿ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಈ ಕುಸ್ತಿಪಟುಗಳು ಕ್ರೀಡಾ ಸಚಿವಾಲಯವನ್ನು ಕೋರಿದ್ದರು. ಈ ಹಿಂದೆ ಹಲವು ಬಾರಿ ಬಜರಂಗ್ ಮತ್ತು ವಿನೇಶ್ ಅವರಿಗೆ ಪೂರ್ಣ ಪ್ರಮಾಣದ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲಾಗಿತ್ತು.
ಇದನ್ನೂ ಓದಿ WFI Election: ನಿವೃತ್ತ ಮುಖ್ಯ ನ್ಯಾಯಮೂರ್ತಿ ಕಣ್ಗಾವಲಿನಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ
ಏಷ್ಯನ್ ಗೇಮ್ಸ್‌ಗೆ ಸಂಘಟಕರು ಜುಲೈ 15ರ ಒಳಗಡೆ ಅಡ್‌ಹಾಕ್ ಸಮಿತಿ ಟ್ರಯಲ್ಸ್ ನಡೆಸಿ ತಂಡದ ಪಟ್ಟಿ ಕಳುಹಿಸಿಕೊಡಬೇಕಿತ್ತು. ಈಗ ಪೂರ್ವಭಾವಿಯಾಗಿ ಟ್ರಯಲ್ಸ್ ನಡೆಸಿ ಐಒಎ ಕುಸ್ತಿಪಟುಗಳ ಪಟ್ಟಿ ಕಳಿಸಬಹುದಾಗಿದೆ. ಆದರೆ ಈ ಆರು ಕುಸ್ತಿಪಟುಗಲು ಪೂರ್ವಭಾವಿ ಟ್ರಯಲ್ಸ್‌ನ ವಿಜೇತರನ್ನು ಸೋಲಿಸಿದಲ್ಲಿ, ಪಟ್ಟಿಯಲ್ಲಿ ಕಳಿಸಿದ ಹೆಸರನ್ನು ನಂತರ ಬದಲಾಯಿಸಲು ಅವಕಾಶವಿದೆ.