Site icon Vistara News

ನಾನು ಭಾರತೀಯ, ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ; ಮೊಹಮ್ಮದ್ ಶಮಿ

Mohammed Shami

ಲಕ್ನೋ: ಇತ್ತೀಚೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವ ಕಪ್ 2023ರ (ICC World Cup 2023) ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ ಪಡೆದ ಬಳಿಕ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಈ ಸಾಧನೆ ಮಾಡಿದ ಕೂಡಲೇ ‘ಸಜ್ದಾ’ (ಮುಸ್ಲಿಂ ನಮಸ್ಕಾರ) ಮಾಡಲು ಮುಂದಾಗಿ ಕೊನೆಗೆ ಟೀಕಾಕಾರರ ಬಾಯಿಗೆ ಆಹಾರವಾಗುತ್ತೇನೆ ಎಂಬ ಭಯದಿಂದ ಇದನ್ನು ನಿಲ್ಲಿಸಿದರೇ ಎಂಬ ವಿಷಯ ಭಾರಿ ಚರ್ಚೆಯಾಗಿತ್ತು. ಇದಕ್ಕೆ ಶಮಿ ಅವರು ಸುಮಾರು ಒಂದು ತಿಂಗಳ ಬಳಿಕ ಉತ್ತರ ನೀಡಿದ್ದಾರೆ.

ಆಜ್​ ತಕ್​ ಸಂದರ್ಶನದಲ್ಲಿ ಶಮಿ ಅವರಿಗೆ ಸಂದರ್ಶಕ ಈ ಕುರಿತು ಪ್ರಶ್ನೆಯೊಂದನ್ನು ಕೇಳಿ, ನೀವು ನಿಜವಾಗಿಯೂ ಸಜ್ದಾ (ಪ್ರಾರ್ಥನೆ) ಮಾಡಲು ಮುಂದಾಗಿ ಇದನ್ನು ಅರ್ಧಕ್ಕೆ ನಿಲ್ಲಿಸಿದರೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶಮಿ, ನಾನು ಹೆಮ್ಮೆಯ ಭಾರತೀಯ. ಇಲ್ಲಿ ನನಗೆ ಯಾವುದೇ ಭಯವಿಲ್ಲ. ನಾನು ಸಜ್ದಾ ಮಾಡಲು ಬಯಸಿದ್ದರೆ ಅದನ್ನು ಯಾರು ಕೂಡ ತೆಡೆಯುತ್ತಿರಲಿಲ್ಲ. ನಾನು ಸಜ್ದಾ ಮಾಡಬೇಕಾದರೆ, ಅದನ್ನು ಮಾಡುತ್ತೇನೆ, ಏನು ಸಮಸ್ಯೆ?ಎಂದು ಉತ್ತರಿಸಿದರು.

“ನನಗೆ ಏನಾದರೂ ಸಮಸ್ಯೆಯಿದ್ದರೆ, ನಾನು ಭಾರತದಲ್ಲಿ ವಾಸಿಸುತ್ತಿರಲಿಲ್ಲ. ಸಜ್ದಾ ಮಾಡಲು ನಾನು ಯಾರೊಬ್ಬರ ಅನುಮತಿಯನ್ನು ತೆಗೆದುಕೊಳ್ಳಬೇಕಾದರೆ, ನಾನು ಇಲ್ಲಿ ಏಕೆ ವಾಸಿಸಬೇಕು. ನನ್ನ ದೇಶ ಭಾರತ ನನಗೆ ಎಲ್ಲವನ್ನು ನೀಡಿದೆ. ಯಾವುತ್ತೂ ಕೂಡ ನಾನೊಬ್ಬ ಮುಸ್ಲಿಂ ಎಂದು ನನ್ನನ್ನು ಕಡೆಗಣಿಸಿಲ್ಲ. ಭೇದ ಭಾವ ಮಾಡಿಲ್ಲ. ಒಂದೊಮ್ಮೆ ಇದನ್ನು ಮಾಡುತ್ತಿದ್ದರೆ ನಾನು ಇಂದು ಭಾರತ ತಂಡದ ಭಾಗವಾಗುತ್ತಿರಲಿಲ್ಲ” ಎಂದು ಹೇಳುವ ಮೂಲಕ ಶಮಿ ಅವರು ತಮ್ಮ ವಿಚಾರದಲ್ಲಿ ದೇಶದ ಹೆಸರಿಗೆ ಕಳಂಕ ತರುವ ಮತ್ತು ಕೋಮು ಸಂಘರ್ಷ ಸಾರುವ ಕಿಡಿಗೇಡಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​

ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದೇಶದ ಶತಕೋಟಿ ಜನರ ಮನಗೆದ್ದಿದ್ದ ಮೊಹಮ್ಮದ್‌ ಶಮಿ(Mohammed Shami) ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಸಚಿವಾಲಯದ ಮೂಲಗಳ ಪ್ರಕಾರ, ಮೊಹಮ್ಮದ್​ ಶಮಿ ಅವರ ಹೆಸರನ್ನು ಸೇರಿಸಲು ಬಿಸಿಸಿಐ ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿಯನ್ನು ಮಾಡಿದೆ. ಏಕೆಂದರೆ ಅವರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

Exit mobile version