ಬೆಂಗಳೂರು: ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಅವರು ದೇಶೀಯ ಕ್ರಿಕೆಟ್ನತ್ತ ಮುಖಮಾಡಿದ್ದಾರೆ. ಜೂನ್ 28ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ(Duleep Trophy) ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಪಶ್ಚಿಮ ವಲಯ ತಂಡಕ್ಕೆ ಅವರು ಆಯ್ಕೆಯಾಗಿದ್ದು ಟೂರ್ನಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. ಇವರ ಜತೆಗೆ ಸೂರ್ಯಕುಮಾರ್ ಯಾದವ್(Suryakumar Yadav) ಕೂಡ ಪಶ್ಚಿಮ ವಲಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಲಂಡನ್ನಲ್ಲಿ ನಡೆದ ದ್ವಿತೀಯು ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಪೂಜಾರ ಎರಡೂ ಇನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ಗೆ ಬಂದ ಚೆಂಡನ್ನು ಬ್ಯಾಟ್ ಎತ್ತಿ ಹಿಡಿದು ಕ್ಲೀನ್ ಬೌಲ್ಡ್ ಆಗಿದ್ದರು. ಪೂಜಾರ ಈ ರೀತಿ ವಿಕೆಟ್ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು.
ವಿಶ್ವ ಟೆಸ್ಟ್ನಲ್ಲಿ ತೋರಿದ ಕಳಪೆ ಪ್ರದರ್ಶನವನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ(BCCI) ಪೂಜಾರ ಅವರನ್ನು ವಿಂಡೀಸ್ ಸರಣಿಯಿಂದ ಕೈ ಬಿಟ್ಟಿತ್ತು. ಇದೀಗ ಮತ್ತೆ ತಂಡಕ್ಕೆ ಆಗಮಿಸಬೇಕಿದ್ದರೆ ಪೂಜಾರ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಬೇಕಿದೆ. ಇದೇ ಕಾರಣಕ್ಕೆ ಅವರು ದೇಶಿಯ ಕ್ರಿಕೆಟ್ನತ್ತ ಮರಳಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಸೇರಿ ಅನೇಕ ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ದೇಶಿ ಕ್ರಿಕೆಟ್ ಆಡಿ ಮತ್ತೆ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಂಡ ನಿದರ್ಶನಗಳು ಹಲವು ಇದೆ. ಇದೇ ಸೂತ್ರವನ್ನು ಇದೀಗ ಪೂಜಾರ ಕೂಡ ಕೈಗೆತ್ತಿಕೊಂಡಂತೆ ತೋರುತ್ತಿದೆ.
ಪೂಜಾರ ಮತ್ತು ಉಮೇಶ್ ಯಾದವ್ ಅವರನ್ನು ಟೆಸ್ಟ್ ಸರಣಿಯಿಂದ ಕೈ ಬಿಟ್ಟ ಕಾರಣ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ T20 World Cup | ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ವಿಶ್ವ ಕಪ್‌ನ ಮೊದಲ ಹಂತದಿಂದಲೇ ಔಟ್
ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.