ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ (Pulwama Attack) 2019ರ ಫೆಬ್ರವರಿ 14ರಂದು ನಡೆದ ಘೋರ ದುರಂತದಲ್ಲಿ ಮಡಿದ ವೀರ ಯೋಧರ ಇಬ್ಬರು ಮಕ್ಕಳಿಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್(Virender Sehwag) ಉಚಿತ ಶಿಕ್ಷಣ ವ್ಯವಸ್ಥೆ ನೀಡುತ್ತಿದ್ದಾರೆ. ಈ ವಿಚಾರನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರ ದಾಳಿ ನಡೆಸಲಾಗಿತ್ತು. ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕೂ ಹೆಚ್ಚು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿಗಳು ಸಾಗುತ್ತಿದ್ದ 78 ವಾಹನಗಳನ್ನು ಗುರಿಯಾಗಿಸಿದ ಭಯೋತ್ಪಾದಕರು ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಭಾರತೀಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಘಟನೆ ನಡೆದು ಇಂದಿಗೆ ನಾಲ್ಕು ವರ್ಷ ತುಂಬಿದೆ.
ಈ ದುರಂತ ಸಂಭವಿಸಿದ್ದ ವೇಳೆ ವೀರೇಂದ್ರ ಸೆಹವಾಗ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಬಳಿಕ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ಇದೀಗ ಸೆಹವಾಗ್ ಅಂದು ಕೊಟ್ಟ ಮಾತಿನಂತೆ ದಾಳಿಯಲ್ಲಿ ಹುತಾತ್ಮರಾಗಿದ್ದ ಇಬ್ಬರು ಸೈನಿಕರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಹರಿಯಾಣದ ತಮ್ಮ ಶಾಲೆಯಲ್ಲಿ ಈ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರಿಕೆಟ್ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ರಾಮ್ ವಕೀಲ್ ಅವರ ಪುತ್ರ ಅರ್ಪಿತ್ ಸಿಂಗ್ ಮತ್ತು ವಿಜಯ್ ಅವರ ಪುತ್ರ ರಾಹುಲ್ ಸೊರೆಂಗ್ ಪ್ರಸ್ತುತ ಹರಿಯಾಣದ ಸೆಹವಾಗ್ ಇಂಟರ್ನ್ಯಾಶನಲ್ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಮಕ್ಕಳ ಫೋಟೊವನ್ನು ಸೆಹವಾಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಮಕ್ಕಳ ಜೀವನದಲ್ಲಿ ಸಣ್ಣ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾಗಿರುವುದು ಬಹಳ ಸೌಭಾಗ್ಯ. ಅರ್ಪಿತ್ ಸಿಂಗ್ s/o ಶಹೀದ್ ರಾಮ್ ವಕೀಲ್ ಮತ್ತು ರಾಹುಲ್ ಸೊರೆಂಗ್ s/o ಶಹೀದ್ ವಿಜಯ್ ಸೊರೆಂಗ್ ಅವರ ಶಿಕ್ಷಣದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ” ಎಂದು ಸೆಹವಾಗ್ ಟ್ವಿಟ್ ಮೂಲಕ ತಿಳಿಸಿದ್ದಾರೆ. ಸೆಹವಾಗ್ ಅವರ ಈ ಕಾರ್ಯಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.