ಮುಂಬಯಿ : ಕನ್ನಡಿಗ ಅನಿಲ್ ಕುಂಬ್ಳೆ ಅವರ ಜತೆಗಿನ ಒಪ್ಪಂದ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೊಸ ಕೋಚ್‌ಗಾಗಿ ಹುಡುಕಾಟ ನಡೆಯುತ್ತಿದ್ದು, ಐಪಿಎಲ್ ೨೦೨೩ರ ಆವೃತ್ತಿಯಲ್ಲಿ (IPL 2023) ತನ್ನ ಬಳಗ ಸೇರುವಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಆಫರ್ ನೀಡಿದೆ. ಅದೇ ರೀತಿ ಆಸ್ಟ್ರೇಲಿಯಾದ ಮಾಜಿ ಆಟಗಾರ, ಅನುಭವಿ ಕೋಚ್ ಟ್ರೆವರ್ ಬೇಲಿಸ್ ಅವರನ್ನು ನೇಮಕ ಮಾಡುವ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ೨೦೨೩ನೇ ಆವೃತ್ತಿ ಆರಂಭವಾಗಲು ಇನ್ನೂ ೮ ತಿಂಗಳು ಬಾಕಿಯಿದೆ. ಈ ನಡುವೆ ಫ್ರಾಂಚೈಸಿಗಳು ತಮ್ಮ ತಂಡಗಳ ಬಲಾಬಲವನ್ನು ಲೆಕ್ಕಾಚಾರ ಹಾಕಲು ಶುರು ಮಾಡಿದೆ. ಅಂತೆಯೇ ಪಂಜಾಬ್ ಕಿಂಗ್ಸ್ ಕೂಡ ಹೊಸ ಕೋಚ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮೂರು ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಜತೆ ಮಾಡಿದ್ದ ಒಪ್ಪಂದ ೨೦೨೨ರ ಆವೃತ್ತಿಗೆ ಮಕ್ತಾಯಗೊಂಡಿದ್ದು ಮುಂದಿನ ಆವೃತ್ತಿಗೆ ಮುಂದುವರಿಸದಿರಲು ನಿರ್ಧರಿಸಿದೆ. ಹೀಗಾಗಿ ಇಯಾನ್ ಮಾರ್ಗನ್ ಅಥವಾ ಟ್ರೆವರ್ ಅವರೊಂದಿಗೆ ಸಂಪರ್ಕ ಸಾಧಿಸಿದೆ.
ಇಯಾನ್ ಮಾರ್ಗನ್ ಅವರು ಕಳೆದ ಆವೃತ್ತಿಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಅದಕ್ಕಿಂತ ಹಿಂದಿನ ವರ್ಷ ಆ ತಂಡದ ನಾಯಕರಾಗಿದ್ದರು. ಆದರೆ, ಪ್ರದರ್ಶನ ವೈಫಲ್ಯದ ಕಾರಣಕ್ಕೆ ಅವರು ಹಿಂದಿನ ಆವೃತ್ತಿಯಲ್ಲಿ ಹೆಚ್ಚು ಆಡುವ ಅವಕಾಶ ಪಡೆದಿರಲಿಲ್ಲ. ಹೀಗಾಗಿ ಮುಂದಿನ ಅವೃತ್ತಿಯಲ್ಲಿ ಯಾವುದೇ ತಂಡದ ಪರ ಆಡುವ ಸಾಧ್ಯತೆಗಳು ಕಡಿಮೆ. ಅಂತೆಯೇ ಅವರು ಎರಡ ತಿಂಗಳು ಹಿಂದೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ನಿವೃತ್ತಿ ಘೋಷಿಸಿದ್ದರು. ಹೊಡೆಬಡಿಯ ಬ್ಯಾಟರ್ ಆಗಿರುವ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಕೋಚಿಂಗ್ ಹುದ್ದೆ ವಹಿಸಲು ಪಂಜಾಬ್ ತಂಡ ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ.
ಅಂತೆಯೇ ಟ್ರೆವರ್ ಬೆಲಿಸ್ ಅವರು ೨೦೧೯ರಲ್ಲಿ ವಿಶ್ವ ಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಅಗಿ ಕೆಲಸ ಮಾಡಿದ್ದರು. ಐಪಿಎಲ್‌ನಲ್ಲಿ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದ್ದರು. ಕೆಕೆಆರ್ ಎರಡು ಬಾರಿ ಪ್ರಶಸ್ತಿ ಗೆದ್ದಾಗಲೂ ಆ ತಂಡದ ಸದಸ್ಯರಾಗಿದ್ದರು. ಹೀಗಾಗಿ ಅವರನ್ನೂ ಕೋಚಿಂಗ್ ವಿಭಾಗಕ್ಕೆ ಸೇರಿಸಲು ಪಂಜಾಬ್ ಮುಂದಾಗಿದೆ ಎನ್ನಲಾಗುತ್ತಿದೆ.
ಅನಿಲ್ ಕುಂಬ್ಳೆ ಅವರು ೨೦೨೦ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸೇರಿದ್ದರು, ೨೦೨೧, ೨೦೨೨ ಸೇರಿ ಮೂರು ಆವೃತ್ತಿಯಲ್ಲಿ ಕೆಲಸ ಮಾಡಿದ್ದರು. ಅವರ ಅವಧಿಯಲ್ಲಿ ತಂಡಕ್ಕೆ ದೊಡ್ಡ ಯಶಸ್ಸು ಲಭಿಸಿರಲಿಲ್ಲ. ಹೀಗಾಗಿ ಗುತ್ತಿಗೆ ಮುಂದುವರಿಸದೇ ಇರಲು ಪಂಜಾಬ್ ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ | ಐಪಿಎಲ್‌ನಲ್ಲಿ ಸರಿಯಾಗಿ ಆಡದಿದ್ದರೆ ಮಾಲೀಕರು ಹೊಡೆಯುತ್ತಾರಾ? ಹೌದು ಎನ್ನುತ್ತಾರೆ ರಾಸ್ ಟೇಲರ್