Site icon Vistara News

‘ತಂಡ ಮೊದಲು, ದಾಖಲೆ ಆ ಮೇಲೆ’ ಕೊಹ್ಲಿಗೆ ಬುದ್ಧಿವಾದ ಹೇಳಿದ ಟೆಸ್ಟ್ ಸ್ಪೆಷಲಿಸ್ಟ್

virat kohli and Cheteshwar Pujara

ಸೌರಾಷ್ಟ್ರ: ಬಾಂಗ್ಲಾದೇಶ(Bangladesh vs India) ವಿರುದ್ಧ ವಿರಾಟ್​ ಕೊಹ್ಲಿ(Virat Kohli) ಅವರು ಬಾರಿಸಿದ ಶತಕದ ಬಗ್ಗೆ ಅನೇಕರು ಪರ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಟೀಮ್​ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್, ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಕೂಡ ಕೊಹ್ಲಿ ಶತಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮೊದಲು ತಂಡ ಆ ಮೇಲೆ ದಾಖಲೆ ಎಂದಿದ್ದಾರೆ.

ಬಾಂಗ್ಲಾದೇಶ ಎದುರು ಭಾರತ ಪಂದ್ಯ ಗೆಲ್ಲಲು 19 ರನ್‌ ಬೇಕಿದ್ದಾಗ, ಕೊಹ್ಲಿಯ ಶತಕಕ್ಕೂ 19 ರನ್ ಬೇಕಿತ್ತು. ಆ ಬಳಿಕ ಸತತವಾಗಿ ಸ್ಟ್ರೈಕ್‌ ತಮ್ಮಲ್ಲೇ ಉಳಿಸಿಕೊಂಡ ವಿರಾಟ್‌ ಕೊಹ್ಲಿ ಅಂತಿಮವಾಗಿ ಸಿಕ್ಸರ್‌ ಮೂಲಕ ಶತಕ ಪೂರೈಸಿದರು. ಆದರೆ ಕೊಹ್ಲಿ ಈ ರೀತಿ ಶತಕ ಬಾರಿಸಿದ್ದು ತಪ್ಪು ಎಂದು ಕೆಲವರು ಅಭಿಪ್ರಾಯಪಟ್ಟೆ ಇನ್ನೂ ಕೆಲವರು ಕೊಹ್ಲಿ ನ್ಯಾಯಯುತ ಶತಕ ಬಾರಿಸಿದ್ದಾರೆ ಎಂದಿದ್ದರು. ಇದೇ ವಿಚಾರದಲ್ಲಿ ಪೂಜಾರ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈಯುಕ್ತಿಕ ದಾಖಲೆಯನ್ನು ಬದಿಗಿಟ್ಟು ಆಡಿ

“ವಿರಾಟ್ ಕೊಹ್ಲಿ ಹಾಗೂ ತಂಡದ ಎಲ್ಲ ಆಟಗಾರರು ವೈಯುಕ್ತಿಕ ದಾಖಲೆಯನ್ನು ಬದಿಗಿಟ್ಟು ತಂಡದ ಹಿತಾಸಕ್ತಿಯ ಕಡೆಗೆ ಗಮನ ಕೊಟ್ಟು ಆಡಬೇಕು. ತಂಡದ ವಿಚಾರದಲ್ಲಿ ಕೆಲವೊಮ್ಮೆ ಸ್ವಲ್ಪ ತ್ಯಾಗ ಮಾಡಬೇಕು ಎಂದು ನನಗನಿಸುತ್ತಿದೆ. ನೀವು ತಂಡವನ್ನು ಗಮನದಲ್ಲಿಟ್ಟುಕೊಂಡು ಆಡಬೇಕು. ತಂಡ ಮೊದಲ ಆಧ್ಯತೆಯಾಗಬೇಕು. ನಾನೂ ಕೂಡಾ ಹಾಗೆ ಯೋಚಿಸುತ್ತೇನೆ. ನೀವು ದಾಖಲೆಗಳನ್ನು ಕೂಡಾ ನಿರ್ಮಿಸಿ, ಆದರೆ ಆ ದಾಖಲೆ ಮಾಡುವ ಸಲುವಾಗಿ ತಂಡದ ಹಿತಾಸಕ್ತಿಗೆ ಹಿನ್ನಡೆಯಾಗಬಾರದು. ಪಂದ್ಯ ಬೇಗನೇ ಮುಕ್ತಾಯಗೊಂಡರೇ ಭಾರತ ರನ್​ ರೇಟ್​ ಆಧಾರದಲ್ಲಿ ಅಗ್ರಸ್ಥಾನಕ್ಕೆ ಏರಬಹುದಿತ್ತು” ಎಂದು ಪೂಜಾರ ಹೇಳಿದರು.

“ಒಬ್ಬ ಆಟಗಾರನಾಗಿ ನಿಮಗೆ ಹಲವು ಆಯ್ಕೆಗಳಿರುತ್ತವೆ. ನೀವು ಶತಕ ಸಿಡಿಸಿದ್ದನ್ನು ನಾನು ನೋಡಿದ್ದೇನೆ. ಮಹತ್ವದ ಟೂರ್ನಿಗಳಲ್ಲಿ ವೈಯಕ್ತಿಕ ದಾಖಲೆಗೆ ಆಡಿದರೆ ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಇಲ್ಲಿ ರನ್​ ರೇಟ್ ಮೇಲೆ ತಂಡದ ಭವಿಷ್ಯ ಅಡಗಿರುತ್ತದೆ. 1 ಅಂಕದ ಹಿನ್ನಡೆಯಿಂದಲೂ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳು ಇವೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪಂದ್ಯವನ್ನು ಮುಗಿಸಿ ತಂಡದ ರನ್​ರೇಟ್​ ಹೆಚ್ಚಿಸಬೇಕು” ಎಂದು ಪೂಜಾರ ಅವರು ಕೊಹ್ಲಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ ಕೊಹ್ಲಿಯ ಶತಕ ನ್ಯಾಯಯುತ, ಅವರು ಯಾವುದೇ ತಪ್ಪು ಮಾಡಿಲ್ಲ; ವಿರೋಧಿಗಳಿಗೆ ತಿರುಗೇಟು ನೀಡಿದ ಶ್ರೀಕಾಂತ್‌

ನ್ಯಾಯಯುತ ಶತಕ

ವಿರಾಟ್ ಬಗ್ಗೆ ಅಪಸ್ವರ ಎತ್ತಿದವರ ವಿರುದ್ಧ 1983ರ ವಿಶ್ವಕಪ್​ ವಿಜೇತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್‌(Krishnamachari Srikkanth) ಅವರು ಟ್ವಿಟರ್​ನಲ್ಲಿ ಖಡಕ್​ ಎಚ್ಚರಿಕೆ ಉತ್ತರ ನೀಡಿದ್ದರು. “ವಿರಾಟ್ ಮಾಡಿದ್ದರಲ್ಲಿ ತಪ್ಪೇನು? ಕ್ರಿಕೆಟ್ ಅರ್ಥವಾಗದವರನ್ನು ನಾನು ಪ್ರಶ್ನಿಸುತ್ತೇನೆ, ವಿಶ್ವಕಪ್‌ನಲ್ಲಿ ಶತಕ ಗಳಿಸುವುದು ದೊಡ್ಡ ವಿಚಾರ ಎಂಬುದನ್ನು ಮೊದಲು ಗಮನಿಸಿ. ಅವರ ಶತಕವನ್ನು ಇಡೀ ತಂಡ ಆನಂದಿಸಿದೆ ಇದೊಂದು ಉತ್ತಮ ಟೀಮ್ ಸ್ಪಿರೀಟ್​ ಎನ್ನುವುದನ್ನು ನಾವು ಇಲ್ಲಿ ಮೊದಲು ಗಮನಿಸಬೇಕು. ಕೊಹ್ಲಿ ಹಾಗೂ ತಂಡಕ್ಕೆ ಅಭಿನಂದನೆಗಳು. ಚೆನ್ನೈ ವಿರುದ್ಧ ಸಂಕಷ್ಟದಲ್ಲಿ ಸಿಲುಕಿದಾಗ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತು ಆಡಿದ್ದರು. ಈಗ ಬಾಂಗ್ಲಾ ವಿರುದ್ದವೂ ಇದೇ ಪ್ರದರ್ಶನ ತೋರಿದ್ದಾರೆ” ಎಂದು ಬರೆದು ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದರು.

Exit mobile version