ಬೆಂಗಳೂರು: ಕೆನಡಾ ಓಪನ್ ಸೂಪರ್(Canada Open) 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು(PV Sindhu) ಮತ್ತು ಲಕ್ಷ್ಯ ಸೇನ್(Lakshya Sen) ಅವರು ಶ್ರೇಷ್ಠಮಟ್ಟದ ಪ್ರದರ್ಶನ ತೋರುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಹಲವು ಟೂರ್ನಿಯಲ್ಲಿ ಅನುಭವಿಸಿದ ವೈಫಲ್ಯವನ್ನು ಇಲ್ಲಿ ಉಭಯ ಬ್ಯಾಡ್ಮಿಂಟನ್ ಪಟುಗಳು ತಿದ್ದಿಕೊಂಡಂತೆ ಕಾಣುತ್ತಿದೆ.
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರಿಗೆ ಜಪಾನ್‌ನ ನಟ್ಸುಕಿ ನಿಡೈರಾ(Natsuki Nidaira) ಅವರಿಂದ ವಾಕ್‌ಓವರ್ ದೊರೆಯಿತು. ಸಿಂಧು ಮುಂದಿನ ಸುತ್ತಿನಲ್ಲಿ 2022ರ ಇಂಡೊನೇಷ್ಯಾ ಮಾಸ್ಟರ್ಸ್ ಚಾಂಪಿಯನ್, ಚೀನಾದ ಗಾವೊ ಫಾಂಗ್ ಜೀ(Gao Fang Jie) ಅವರ ಸವಾಲನ್ನು ಎದುರಿಸಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿರುವ ಸೇನ್ ಅವರು ಶುಕ್ರವಾರ ನಡೆದ ಪಂದ್ಯದಲ್ಲಿ ಬ್ರೆಜಿಲ್‌ನ ಇಗೊರ್ ಕೊಯೆಲೊ ಅವರನ್ನು 21-15, 21-11 ರಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಗಿಟ್ಟಿಸಿಕೊಂಡರು. ಸೇನ್ ಮುಂದಿನ ಹಂತದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಜಿ ಅವರನ್ನು ಎದುರಿಸಲಿದ್ದಾರೆ.
ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟ ಸೇನ್ ಎದುರಾಳಿ 2 ಅಂಕ ಗಳಿಸುವವರೆಗೂ ಖಾತೆ ತೆರೆದಿರಲಿಲ್ಲ. ಆ ಬಳಿಕ ಆಕ್ರಮಣಕಾರಿ ಆಡವಾಡಿದ ಸೇನ್ ಬಲಿಷ್ಠ ಸರ್ವ್ ಮತ್ತು ಹೊಡೆತಗಳೊಂದಿಗೆ ಮುನ್ನುಗ್ಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಉಭಯ ಆಟಗಾರರ ಈ ಹೋರಾಟ ಕೇವಲ 31 ನಿಮಿಷಕ್ಕೆ ಅಂತ್ಯ ಕಂಡಿತು.
ಇದನ್ನೂ ಓದಿ PV Sindhu: ನೂತನ ಕೋಚ್ ಮೊರೆ ಹೋದ ಪಿ.ವಿ. ಸಿಂಧು
ಡಬಲ್ಸ್ನಲ್ಲಿ ಸೋಲು
ದಿನದ ಮತ್ತೊಂದು ಪುರುಷರ ಡಬಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಜೋಡಿ ವಿಶ್ವದ 7ನೇ ಶ್ರೇಯಾಂಕದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಜೋಡಿಯ ಎದುರು 9-21 11-21ರಿಂದ ಸೋಲು ನಿರಾಸೆ ಮೂಡಿಸಿದರು. ಆರಂಭದಿಂದಲೂ ಭಾರತೀಯ ಜೋಡಿ ಎದುರಾಳಿಯ ಆಕ್ರಮಣಕಾರಿ ಆಟದ ಮುಂದೆ ಮಂಕಾದರು. ಯಾವುದೇ ಹಂತದಲ್ಲಿಯೂ ಪ್ರತಿ ಹೋರಾಟ ನೀಡದೆ ಶರಣಾದರು.