ಸಿಂಗಾಪುರ: ಭಾರತದ ಪ್ರತಿಭಾವಂತ Badminton ತಾರೆ ಪಿ.ವಿ ಸಿಂಧೂ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಯುವ ಆಟಗಾರ್ತಿ ಸಯೇನಾ ಕವಕಮಿ ವಿರುದ್ಧ 21-15, 21-7 ಗೇಮ್‌ಗಳಿಂದ ಜಯ ಸಾಧಿಸಿದ ಅವರು ಮೊಟ್ಟಮೊದಲ ಬಾರಿಗೆ ಈ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಹಾಲಿ ಆವೃತ್ತಿ ಸೂಪರ್ ೫೦೦ ಸೀರೀಸ್ ಪ್ರಶಸ್ತಿ ಮುಡಿಗೇರಿಕೊಳ್ಳಲು ಒಂದು ಪಂದ್ಯ ಗೆಲ್ಲಬೇಕಾಗಿದೆ.
ವಿಶ್ವದ ಏಳನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಪಿ. ವಿ ಸಿಂಧೂಗೆ ೩೮ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಸವಾಲೇ ಎನಿಸಿಕೊಳ್ಳಲಿಲ್ಲ. ಮೊದಲ ಗೇಮ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದ ಕವಕಮಿ, ಎರಡನೇ ಗೇಮ್‌ನಲ್ಲಿ ಹೈದರಾಬಾದ್ ಮೂಲದ ಆಟಗಾರ್ತಿ ಸಂಪೂರ್ಣವಾಗಿ ಪಾರಮ್ಯ ಮೆರೆದರು.
ಸಿಂಧೂ ಹಾಗೂ ೨೪ ವರ್ಷದ ಜಪಾನ್ ಆಟಗಾರ್ತಿ ಕವಕಮಿ ಈ ಪಂದ್ಯಕ್ಕೆ ಮೊದಲು ೨-೦ ಮುಖಾಮುಖಿ ಮುನ್ನಡೆ ಗಿಟ್ಟಿಸಿಕೊಂಡಿದ್ದರು.
ಟೂರ್ನಿಯಲ್ಲಿ ಪಾರಮ್ಯ
ಕಳೆದ ಹಲವು ತಿಂಗಳಿಂದ ಪ್ರದರ್ಶನ ವೈಫಲ್ಯ ಎದುರಿಸುತ್ತಿರುವ ಪಿ. ವಿ ಸಿಂಧೂ ಕೊನೆಗೂ ಫಾರ್ಮ್ ಕಂಡುಕೊಂಡಂತಾಗಿದೆ. ಆರಂಭದಿಂದಲೂ ಈ ಟೂರ್ನಿಯಲ್ಲಿ ಪಾರಮ್ಯ ಮೆರೆಯುತ್ತಿರುವ ಅವರು ಎಂಟರ ಘಟ್ಟದ ಸ್ಪರ್ಧೆಯಲ್ಲಿ ಚೀನಾದ ಹಾನ್ ಯೂ ವಿರುದ್ಧ ೧೭-೨೧, ೨೧-೧೧, ೨೧-೧೯ ಗೇಮ್‌ಗಳಿಂದ ಗೆಲುವು ಸಾಧಿಸಿದ್ದರು.
ಇದರೊಂದಿಗೆ ಅವರು ಕಳೆದ ಮೇ ತಿಂಗಳಲ್ಲಿ ಥಾಯ್ಲೆಂಡ್ ಓಪನ್‌ನ ಸೆಮಿಫೈನಲ್ಸ್‌ಗೇರಿದ ಬಳಿಕ ಮೊದಲ ಬಾರಿ ಬ್ಯಾಡ್ಮಿಂಟನ್ ಟೂರ್ನಿಯೊಂದರ ಫೈನಲ್‌ಗೆ ಎಂಟ್ರಿ ಗಿಟ್ಟಿಸಿಕೊಂಡರು.
ಇದನ್ನೂ ಓದಿ | Badminton : ತಪ್ಪೇ ಮಾಡದ ಸಿಂಧೂಗೆ ದಂಡ ಹಾಕಿ ಇದೀಗ ಕ್ಷಮೆ ಕೋರಿದ ತಾಂತ್ರಿಕ ಸಮಿತಿ