Site icon Vistara News

PV Sindhu: ಉಬರ್ ಕಪ್ ತಂಡದಿಂದ ಹಿಂದೆ ಸರಿದ ಸಿಂಧು; ಥಾಮಸ್‌ ಕಪ್​ಗೆ ಬಲಿಷ್ಠ ತಂಡ

pv sindhu

ನವದೆಹಲಿ: ಪ್ರತಿಷ್ಠಿತ ಉಬರ್‌ ಕಪ್‌(Uber Cup) ಟೂರ್ನಿಯಿಂದ ಭಾರತದ ಅವಳಿ ಒಲಿಂಪಿಕ್​​ ವಿಜೇತೆ ಪಿ.ವಿ.ಸಿಂಧು(PV Sindhu) ಅವರು ಹಿಂದೆ ಸರಿದಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಸವಾಲಿಗೆ ಸಜ್ಜಾಗುವ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇವರ ಜತೆ ಮತ್ತಿಬ್ಬರು ಅಗ್ರ ಡಬಲ್ಸ್‌ ಜೋಡಿಗಳು ಕೂಡ ಹಿಂದೆ ಸರಿದಿವೆ. ಚೀನಾದ ಚೆಂಗ್ಡುವಿನಲ್ಲಿ ಏಪ್ರಿಲ್​ 27 ರಿಂದ ಈ ಟೂರ್ನಿಗಳು ಆರಂಭಗೊಳ್ಳಲಿದೆ. ಥಾಮಸ್‌ ಕಪ್‌ಗೆ(Thomas Cup) ಭಾರತದ ಪ್ರಬಲ ತಂಡವನ್ನೇ ಪ್ರಕಟಿಸಿದೆ.

ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್​ ಬಳಿಕ ಆಡಿದ ಎಲ್ಲ ಪ್ರಮುಖ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಾಣುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷಗಳಲ್ಲಿ ನಡೆದ ಟೂರ್ನಿಗಳಲ್ಲಿ ದ್ವಿತೀಯ ಹಂತಕ್ಕೆ ಏರಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. ಇದೀಗ ಪ್ಯಾರಿಸ್​ ಒಲಿಂಪಿಕ್ಸ್​ಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇರುವ ಕಾರಣದಿಂದ ಅವರು ಕಠಿಣ ಅಭ್ಯಾಸದ ಮೊರೆ ಹೋಗಿದ್ದಾರೆ. ಈ ಕಾರಣದಿಂದ ಅವರು ಉಬರ್‌ ಕಪ್‌ ಆಡದಿರಲು ನಿರ್ಧರಿಸಿದ್ದಾರೆ. ಸಿಂದು ಅವರ ಈ ನಿರ್ಧಾರವನ್ನು ಭಾರತೀಯ ಬ್ಯಾಡ್ಮಿಂಟನ್​ ಸಮ್ಮತಿಸಿದೆ. ಅಲ್ಲದೆ ಪ್ಯಾರಿಸ್‌ನಲ್ಲಿ ಸಿಂಧು ಮತ್ತೊಂದು ಪದಕ ಪಡೆಯುವ ವಿಶ್ವಾಸದಲ್ಲಿದ್ದಾರೆ ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಂಧು ಅವರು ಟೂರ್ನಿಯಿಂದ ಹಿಂದೆ ಸರಿದ ಕಾರಣ ಡಬಲ್ಸ್‌ ಜೋಡಿಯಾದ ಟ್ರೀಸಾ ಜೋಳಿ-ಗಾಯತ್ರಿ ಗೋಪಿಚಂದ್ ಮತ್ತು ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಜೋಡಿ ಕೂಡ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ India Open 2024 Final: ಇಂಡಿಯಾ ಓಪನ್​ ಫೈನಲ್​ನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿಗೆ ಸೋಲು

2022ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಥಾಮಸ್‌ ಕಪ್‌ನಲ್ಲಿ ಭಾರತ 3–0 ಅಂತರದಿಂದ ಇಂಡೊನೇಷ್ಯಾವನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಆಗಿರುವ ಭಾರತ ಈ ಬಾರಿಯೂ ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸಿದೆ. ಎಚ್‌.ಎಸ್‌.ಪ್ರಣಯ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವದ ನಂಬರ್ 1 ಡಬಲ್ಸ್‌ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬರವಸೆಯ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯೂ ಥಾಮಸ್​ ಕಪ್​ನಲ್ಲಿ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸುವ ನಿರೀಕ್ಷೆಯೊಂದನ್ನು ಮಾಡಬಹುದು.

ಥಾಮಸ್ ಕಪ್ ತಂಡ


ಸಿಂಗಲ್ಸ್‌: ಎಚ್‌.ಎಸ್‌.ಪ್ರಣಯ್, ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಪ್ರಿಯಾಂಶು ರಾಜಾವತ್‌ ಮತ್ತು ಕಿರಣ್ ಜಾರ್ಜ್‌.

ಡಬಲ್ಸ್‌: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಎಂ.ಆರ್‌. ಅರ್ಜುನ್‌, ಧ್ರುವ ಕಪಿಲ ಮತ್ತು ಸಾಯಿ ಪ್ರತೀಕ್.

ಉಬರ್ ಕಪ್ ತಂಡ


ಸಿಂಗಲ್ಸ್‌: ಅನ್ಮೋಲ್‌ ಖಾರ್ಬ್, ತನ್ವಿ ಶರ್ಮಾ, ಅಶ್ಮಿತಾ ಚಾಲಿಹಾ ಮತ್ತು ಇಶಾರಾಣಿ ಬರೂವಾ.

ಡಬಲ್ಸ್‌: ಶ್ರುತಿ ಮಿಶ್ರಾ, ಪ್ರಿಯಾ ಕೊಂಜೆಂಗ್‌ಬಾಮ್, ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಥಾಕರ್.

Exit mobile version