ಕೌಲಾಲಂಪುರ: ಮಲೇಷ್ಯಾ ಓಪನ್ (Malaysia Open) ಸೂಪರ್ ೭೫೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ. ವಿ. ಸಿಂಧೂ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್ ಕೂಡ ಎರಡನೇ ಸುತ್ತಿಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧೂ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ೧೦ನೇ ರ‍್ಯಾಂಕ್‌ನ ಥಾಯ್ಲೆಂಡ್‌ನ ಆಟಗಾರ್ತಿ ಪೊರ್ನ್‌ಪಾವಿ ಚೊಚುವಾಂಗ್ ಅವರನ್ನು 21-13 21-17 ಗೇಮ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಆದರೆ, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಈ ಟೂರ್ನಿಯಲ್ಲೂ ವೈಫಲ್ಯ ಕಂಡಿದ್ದಾರೆ. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ವಿಶ್ವದ ಮೂರನೇ ರ‍್ಯಾಂಕ್‌ನ ಆಟಗಾರ್ತಿ ಅಮೆರಿಕದ ಐರಿಸ್ ವಾಂಗ್ ವಿರುದ್ಧ ೧೧-೨೧, ೧೭-೨೧ ಗೇಮ್‌ಗಳಿಂದ ಸೋಲು ಕಂಡರು.
ಏಳನೇ ಶ್ರೇಯಾಂಕದ ಪಿ.ವಿ. ಸಿಂಧೂ ಮುಂದಿನ ಸುತ್ತಿನಲ್ಲಿ ಮುಂದಿನ ಸುತ್ತಿನಲ್ಲಿ ೨೧ ವರ್ಷದ ಥಾಯ್ಲೆಂಡ್‌ನ ಫಿಟ್ಟಿಯಾಪೊರ್ನ್ ಚೈವಾನ್ ವಿರುದ್ಧ ಆಡಬೇಕಾಗಿದೆ. ಫಿಟ್ಟಿಯಾಪೊರ್ನ್ ವಿಶ್ವ ಜೂನಿಯರ್ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದವರು ಹಾಗೂ ಇತ್ತೀಚಿನ ಉಬೆರ್ ಕಪ್‌ನಲ್ಲಿ ಕಂಚು ಗೆದ್ದ ಥಾಯ್ಲೆಂಡ್ ತಂಡದ ಸದಸ್ಯರು ಕೂಡ.
ಕಶ್ಯಪ್‌ಗೆ ಗೆಲುವು: ಪುರುಷರ ಸಿಂಗಲ್ಸ್‌ನಲ್ಲಿ ಕಾಮನ್ವೆಲ್ತ್ ಮಾಜಿ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಅವರು ಕೊರಿಯಾದ ಹಿ ಕ್ವಾಂಗ್ ಹೀ ವಿರುದ್ಧ ೨೧-೧೨, ೨೧-೧೭ ಗೇಮ್‌ಗಳಿಂದ ಗೆಲುವು ಸಾಧಿಸಿದರು. ಕಶ್ಯಪ್ ಮುಂದಿನ ಹಣಾಹಣಿಯಲ್ಲಿ ಥಾಯ್ಲೆಂಡ್‌ನ ಕುನಾಲ್ವತ್ ವಿಟಿಡ್‌ಸರ್ನ್ ವಿರುದ್ಧ ಸೆಣಸಾಡಲಿದ್ದಾರೆ.
ಇದೇ ವೇಳೆ ಸುಮೀತ್ ರೆಡ್ಡಿ ಹಾಗೂ ಅಶ್ವಿನ್ ಪೊನ್ನಪ್ಪ ಅವರನ್ನೊಳಗೊಂಡ ಭಾರತ ಮಿಶ್ರ ಡಬಲ್ಸ್ ಜೋಡಿ ನೆದರ್ಲೆಂಡ್ಸ್‌ನ ರಾಬಿನ್ ಟಬೆಲಿಂಗ್ ಹಾಗೂ ಸೆಲೆನಾ ಪಿಕ್ ವಿರುದ್ಧ ೧೫-೧೨, ೨೧-೧೯, ೧೭-೨೧ ಗೇಮ್‌ಗಳಿಂದ ಸೋಲು ಕಂಡರು.