ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಇಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನ್ ಜೋಡಿ ರವೀಂದ್ರ ಜಡೇಜಾ(Ravindra Jadeja) ಮತ್ತು ಆರ್. ಅಶ್ವಿನ್(R Ashwin) ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರ್.ಅಶ್ವಿನ್ ಅವರು ಆರಂಭಿಕ ಆಘಾತವಿಕ್ಕಿದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಬೆನ್ ಡಕೆಟ್ (35) ವಿಕೆಟ್ ಕಿತ್ತರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಅವರು ಓಲಿ ಪೋಪ್ (1) ವಿಕೆಟ್ ಉರುಳಿಸಿದರು. ಈ ಎರಡು ವಿಕೆಟ್ ಪತನಗೊಂಡ ತಕ್ಷಣ ಈ ಜೋಡಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿತು. ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ಹಿರಿಮೆಗೆ ಪಾತ್ರವಾಯಿತು.
HISTORY IN HYDERABAD….!!!! ⭐
— Mufaddal Vohra (@mufaddal_vohra) January 25, 2024
Jadeja and Ashwin have taken most wickets as an Indian bowling pair in Test cricket – 502*. pic.twitter.com/qO3jIGCoP0
ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಕುಂಬ್ಳೆ ಮತ್ತು ಹರ್ಭಜನ್ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್ ಉರುಳಿಸಿದ್ದರು. ಆದರೆ ಇದೀಗ ಜಡೇಜ-ಅಶ್ವಿನ್ ಜೋಡಿ 502* ವಿಕೆಟ್ ಕಿತ್ತು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ Joe Root: ಕ್ರಿಕೆಟ್ ದೇವರು ಸಚಿನ್ ದಾಖಲೆ ಮುರಿದ ಜೋ ರೂಟ್
ವಿಶ್ವ ದಾಖಲೆ ಇರುವುದು ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿ. ಈ ಜೋಡಿ 138 ಟೆಸ್ಟ್ ಪಂದ್ಯಗಳನ್ನಾಡಿ ಬರೋಬ್ಬರಿ 1039 ವಿಕೆಟ್ಗಳನ್ನು ಕಬಳಿಸಿದ್ದಾರೆ. ಸದ್ಯಕ್ಕೆ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಅಸಾಧ್ಯ ಎನ್ನಬಹುದು. ಇದು ವಿಶ್ವ ದಾಖಲೆಯಾಗಿಯೇ ಉಳಿಯುವ ಸಾಧ್ಯತೆ ಇದೆ.
500 ವಿಕೆಟ್ ಸನಿಹ ಅಶ್ವಿನ್
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರ್. ಅಶ್ವಿನ್ ಇನ್ನು 9 ವಿಕೆಟ್ ಉರುಳಿಸಿದರೆ ನೂತನ ಮೈಲುಗಲ್ಲೊಂದನ್ನು ತಲುಪಲಿದ್ದಾರೆ. ಟೆಸ್ಟ್ನಲ್ಲಿ 500 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ 619 ವಿಕೆಟ್ ಪಡೆದಿದ್ದಾರೆ.
37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿ 491* ವಿಕೆಟ್ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆಯೂ ಇವರದ್ದಾಗಿದೆ. 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ