Site icon Vistara News

R Ashwin: ಮೆಗಾ ಹರಾಜಿಗೂ ಮುನ್ನ ಚೆನ್ನೈ ಫ್ರಾಂಚೈಸಿ ಸೇರಿದ ಆರ್​. ಅಶ್ವಿನ್; ಹೊಸ ಜವಾಬ್ದಾರಿ

R Ashwin

R Ashwin: Ashwin 'Returns To CSK' Ahead Of IPL 2025 Auction, But In New Role

ಚೆನ್ನೈ: ಮುಂಬರುವ ಐಪಿಎಲ್​ 2025(IPL 2025) ಆಟಗಾರರ ಮೆಗಾ ಹರಾಜಿಗೆ(IPL 2025 Auction) ಮುನ್ನವೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜಸ್ಥಾನ್​​ ರಾಯಲ್ಸ್​ ತಂಡದ ಆರ್​. ಅಶ್ವಿನ್​(R Ashwin) ಮರಳಿ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಗೆ(CSK) ಮರಳಿದ್ದಾರೆ. 2008 ರಿಂದ 2015 ರವರೆಗೆ ಅಶ್ವಿನ್​ ಚೆನ್ನೈ ತಂಡದ ಪರ ಆಡಿದ್ದರು. ಇದೀಗ ಅವರಿಗೆ ಫ್ರಾಂಚೈಸಿ ಹೊಸ ಜವಾಬ್ದಾರಿ ನೀಡಿದೆ. ಆಟಗಾರನಾಗಿ ಅಲ್ಲ. ಬದಲಾಗಿ ಸಿಎಸ್‌ಕೆಯ ಹೈ-ಪರ್ಫಾರ್ಮೆನ್ಸ್ ಸೆಂಟರ್‌ ಕೇಂದ್ರದಲ್ಲಿ ಆಟಗಾರರ ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಸುಧಾರಣೆಯ ಮಾಡುವ ಜವಾಬ್ದಾರಿ ನೀಡಿದೆ.

‘ಕ್ರಿಕೆಟ್ ಅನ್ನು ಬೆಳೆಸುವುದು ಮತ್ತು ಕ್ರಿಕೆಟ್ ಬಳಗಕ್ಕೆ ಕೊಡುಗೆ ನೀಡುವುದು ನನ್ನ ಮುಖ್ಯ ಗುರಿಯಾಗಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಸಂಸ್ಥೆಗೆ ಇದೀಗ ಮರಳಿರುವುದು ಸಂತೋಷವಾಗಿದೆ.’ ಎಂದು ಅಶ್ವಿನ್ ಹೇಳಿದ್ದಾರೆ.

‘ಅಶ್ವಿನ್ ನಮ್ಮ ಫ್ರಾಂಚೈಸಿಗೆ ಮರಳುತ್ತಿರುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಅವರು ಸೂಪರ್‌ಕಿಂಗ್ಸ್ ವೆಂಚರ್ಸ್ ಮತ್ತು ನಮ್ಮ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದ್ದಾರೆ. ಅವರ ಬದ್ಧತೆ ಮತ್ತು ಅತ್ಯುತ್ತಮ ಆಟವು ಭಾರತ, ತಮಿಳುನಾಡು ತಂಡಕ್ಕೆ ತಿಳಿದಿದೆ’ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದರು.

ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ Ravichandran Ashwin : ಪಂದ್ಯದ ನಡುವೆ ಪತಿ ಎದುರಿಸಿದ ಕಷ್ಟಗಳನ್ನು ವಿವರಿಸಿದ ಆರ್​. ಅಶ್ವಿನ್ ಪತ್ನಿ

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಇಂಪ್ಯಾಕ್ಟ್​ ನಿಯಮ ಕೈಬಿಡುವ ಸಾಧ್ಯತೆ!


ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್​ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.

Exit mobile version