ಸಿಡ್ನಿ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ವಿಶ್ವ ಕಪ್ ಪಂದ್ಯದ ಜಿದ್ದಾಜಿದ್ದಿನ ಹೋರಾಟದ ಕ್ಷಣಗಳನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಇನಿಂಗ್ಸ್‌ನ ಕೊನೇ ಎಸೆತದ ತನಕವೂ ನಡೆದ ಆ ಪಂದ್ಯದಲ್ಲಿ ಭಾರತ ತಂಡ ೪ ವಿಕೆಟ್‌ಗಳಿಂದ ವಿಜಯ ಸಾಧಿಸಿತ್ತು. ಈ ಪಂದ್ಯದ ಕೊನೇ ಓವರ್‌ನಲ್ಲಿ ಭಾರತ ತಂಡ, ದಿನೇಶ್ ಕಾರ್ತಿಕ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಗಿತ್ತು. ಕೊನೆಗೆ ಆರ್. ಅಶ್ವಿನ್ ಗೆಲುವಿನ ರನ್ ಬಾರಿಸಿದ್ದರು.
ಮೊಹಮ್ಮದ್ ನವಾಜ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಭಾರತ ತಂಡಕ್ಕೆ ೧೬ ರನ್‌ಗಳು ಬೇಕಾಗಿದ್ದವು. ಹಾರ್ದಿಕ್ ಪಾಂಡ್ಯ ಮೊದಲ ಎಸೆತಕ್ಕೆ ಕ್ಯಾಚಿತ್ತು ಔಟಾಗಿದ್ದರು. ನಂತರ ಬ್ಯಾಟ್ ಮಾಡಲು ಬಂದ ದಿನೇಶ್ ಕಾರ್ತಿಕ್ ಎರಡನೇ ಎಸೆತದಲ್ಲಿ ಒಂದು ರನ್ ಬಾರಿಸಿದ್ದರು. ನಾಲ್ಕನೇ ಎಸೆತ ಎದುರಿಸಿದ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿದ್ದರು. ಅದು ನೋಬಾಲ್ ಆಗಿತ್ತು. ಫ್ರಿ ಹಿಟ್ ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದರು. ಅದರೆ, ಚೆಂಡು ವಿಕೆಟ್‌ಗೆ ಬಡಿದು ಬೌಂಡರಿ ಲೈನ್ ಕಡೆಗೆ ಹೋಗಿತ್ತು. ವಿರಾಟ್ ಹಾಗೂ ದಿನೇಶ್ ಮೂರು ರನ್ ಗಳಿಸಿದ್ದರು. ಇದಾದ ಬಳಿಕ ಈ ವೇಳೆ ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ಸಿಕ್ಕಿತ್ತು ಹಾಗೂ ಭಾರತದ ಗೆಲುವಿಗೆ ೨ ರನ್ ಬೇಕಾಗಿತ್ತು. ಈ ವೇಳೆ ದಿನೇಶ್ ಕಾರ್ತಿಕ್ ಅನಗತ್ಯ ರನ್‌ಔಟ್‌ಗೆ ಬಲಿಯಾಗಿದ್ದರು. ಒಂದು ಎಸೆತಕ್ಕೆ ಎರಡು ರನ್ ಬೇಕು ಎಂಬ ಪರಿಸ್ಥಿತಿಯಲ್ಲಿ ಆರ್. ಅಶ್ವಿನ್ ಬ್ಯಾಟ್ ಮಾಡಲು ಬರಬೇಕಾಯಿತು. ಇದು ಅತ್ಯಂತ ಒತ್ತಡದ ಪರಿಸ್ಥಿತಿಯಾಗಿದೆ. ಈ ಸಂದರ್ಭದ ಕುರಿತು ಮಾತನಾಡಿದ ಅಶ್ವಿನ್, ನಾನು ದಿನೇಶ್ ಕಾರ್ತಿಕ್‌ಗೆ ಶಾಪ ಹಾಕಿದ್ದೆ ಎಂಬುದಾಗಿ ಹೇಳಿದ್ದಾರೆ.
“ದಿನೇಶ್ ಕಾರ್ತಿಕ್ ಅವರು ಔಟಾಗುತ್ತಿದ್ದಂತೆ ನಾನು ಬ್ಯಾಟ್ ಮಾಡಲು ಹೊರಟೆ. ಮೈದಾನಕ್ಕೆ ಇಳಿದ ತಕ್ಷಣ ನಾನು ಔಟಾಗಿ ಬಂದ ದಿನೇಶ್ ಕಾರ್ತಿಕ್‌ಗೆ ಹಿಡಿ ಶಾಪ ಹಾಕಿದೆ. ತಕ್ಷಣದಲ್ಲೇ ಸುಧಾರಿಸಿಕೊಂಡು ನಾನು ರನ್ ಬಾರಿಸಬಲ್ಲೆ ಎಂದು ನಿರ್ಧರಿಸಿದೆ,” ಎಂಬುದಾಗಿ ಅಶ್ವಿನ್ ಹೇಳಿದ್ದಾರೆ.
ಇದನ್ನೂ ಓದಿ | Team India | ನನ್ನನ್ನು ಕಾಪಾಡಿದ ಅಶ್ವಿನ್‌ಗೆ ಧನ್ಯವಾದಗಳು ಎಂದು ದಿನೇಶ್ ಕಾರ್ತಿಕ್ ಹೇಳಿದ್ದು ಯಾಕಿರಬಹುದು?