ಚೆನ್ನೈ: ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ ಟೆಸ್ಟ್ ಪಂದ್ಯವಾಡುತ್ತಿದ್ದ ಆರ್.ಅಶ್ವಿನ್(R Ashwin) ಅವರು ತಾಯಿಯ ಅನಾರೋಗ್ಯದಿಂದಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿಢೀರನೇ ಚೆನ್ನೈಗೆ ಬಂದಿದ್ದರು. ಇದೀಗ ಅಶ್ವಿನ್ ಉಳಿದಿರುವ 2 ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಶ್ವಿನ್ ಅವರು ಉಳಿದ ಪಂದ್ಯದಿಂದ ಹೊರಗುಳಿದರೆ ಭಾರತಕ್ಕೆ ಇದು ಭಾರೀ ಹಿನ್ನಡೆಯಾಗಿ ಕಾಡಬಹುದು. ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಬದಲು ದೇವದತ್ತ ಪಡಿಕ್ಕಲ್ ಫೀಲ್ಡಿಂಗ್ ನಡೆಸುತ್ತಿದ್ದಾರೆ. ಆದರೆ ಇವರಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶವಿಲ್ಲ. ಏಕೆಂದರೆ ಅಶ್ವಿನ್ 2 ದಿನ ಆಡಿ ಬಳಿಕ ಹಿಂದೆ ಸರಿದಿದ್ದರು. ಆಟಗಾರನೊಬ್ಬ ಅಂಗಳದಲ್ಲಿ ತಲೆಗೆ ಏಟು ಅನುಭವಿಸಿ ಹೊರಬಿದ್ದ ಸಂದರ್ಭದಲ್ಲಷ್ಟೇ ಬದಲಿ ಆಟಗಾರನನ್ನು ಆಡಿಸಬಹುದಾಗಿದೆ.
ಒಂದೊಮ್ಮೆ ಅಶ್ವಿನ್ ಅವರು ಮುಂದಿನ ಎರಡು ಟೆಸ್ಟ್ಗಳಿಗೆ ಅಲಭ್ಯರಾದರೆ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು. ಉಭಯ ಆಟಗಾರರು ಕೂಟ ಈ ಸರಣಿಯ ಭಾಗವಾಗಿದ್ದಾರೆ. ಒಟ್ಟಾರೆ ಈ ಬಾರಿ ಭಾರತ ಅನುಭವಿಗಳ ಕೊರತೆಯಿಂದಲೇ ಸರಣಿ ಆಡುವಂತಾಗಿದೆ.
ಇದನ್ನೂ ಓದಿ Cheteshwar Pujara: ದೇಶೀಯ ಕ್ರಿಕೆಟ್ನಲ್ಲಿ 63ನೇ ಶತಕ ಬಾರಿಸಿದ ಚೇತೇಶ್ವರ್ ಪೂಜಾರ
ಮೋದಿಯಿಂದ ಮೆಚ್ಚುಗೆ
ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಿತ್ತ ಸಾಧನೆ ಮಾಡಿದ ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(R Ashwin) ಅವರಿಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಮೆಚ್ಚುಗೆ ಮತ್ತು ಅಭಿನಂಧನೆ ಸಲ್ಲಿಸಿದ್ದರು. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಅಶ್ವಿನ್ ಅವರು ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500(R Ashwin historic 500th Test wicket) ವಿಕೆಟ್ಗಳ ಮೈಲುಗಲ್ಲು ತಲುಪಿದ್ದರು.
Congratulations to Ravichandran Ashwin on the extraordinary milestone of taking 500 Test wickets! His journey and accomplishments are testament to his skill and perseverance. My best wishes to him as he scales further peaks. @ashwinravi99
— Narendra Modi (@narendramodi) February 16, 2024
ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ‘500 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಅಸಾಮಾನ್ಯ ಸಾಧನೆಗಾಗಿ ರವಿಚಂದ್ರನ್ ಅಶ್ವಿನ್ ಅವರಿಗೆ ಅಭಿನಂದನೆಗಳು. ಅವರ ಪ್ರಯಾಣ ಮತ್ತು ಸಾಧನೆಗಳು ಅವರ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಧನೆಗಳ ಶಿಖರಗಳನ್ನು ಏರುವಂತೆ ಆಗಲಿ. ಅವರಿಗೆ ನನ್ನ ಶುಭಾಶಯಗಳು’ ಎಂದು ಮೋದಿ ಹಾರೈಸಿದ್ದರು.
500 ವಿಕೆಟ್ ಕಿತ್ತ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಅಶ್ವಿನ್ ಪಾತ್ರರಾದರು. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ 619 ವಿಕೆಟ್ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಬೌಲರ್ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(696*) ಮತ್ತು ಆಸ್ಟ್ರೇಲಿಯಾದ ನಥಾನ್ ಲಿಯೋನ್(512*) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.