Site icon Vistara News

England tour | ಕೊರೊನಾ ಸೋಂಕು: ಅಶ್ವಿನ್‌ಗೆ ಇಂಗ್ಲೆಂಡ್‌ ವಿಮಾನ ಮಿಸ್‌

England Tour

ನವ ದೆಹಲಿ: ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ (England tour) ಮೊದಲು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾಗಹಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರು ಕೊರೊನಾ ಸೋಂಕಿಗೆ ಒಳಗಾಗಿರುವ ಅವರಿಗೆ ಟೀಮ್‌ ಇಂಡಿಯಾ ಜತೆ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ. ಅವರ ಆರ್‌ಟಿಪಿಸಿಆರ್‌ ವರದಿ ಪಾಸಿಟಿವ್‌ ಬಂದ ಕಾರಣ ಇಂಗ್ಲೆಂಡ್‌ ವಿಮಾನ ಮಿಸ್‌ ಆಗಿದೆ.

ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡದ ಹಿರಿಯ ಆಟಗಾರರು ಜೂನ್‌ ೧೬ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಆ ತಂಡದಲ್ಲಿ ಆರ್‌. ಅಶ್ವಿನ್‌ ಕೂಡ ಇದ್ದರು . ಆದರೆ, ಪ್ರಯಾಣಕ್ಕೆ ಮೊದಲು ನಡೆಸಿದ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ವರದಿ ಪಾಸಿಟಿವ್‌ ಬಂದ ಕಾರಣ ವಿಮಾನ ಏರಲು ಅವಕಾಶ ಸಿಗಲಿಲ್ಲ. ತಕ್ಷಣ ಅವರನ್ನು ಸ್ಥಳದಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನು ಅವರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಕೊರೊನಾ ಸಂಬಂಧಿತ ನಿಯಮಗಳನ್ನು ಪಾಲಿಸಿ ಪ್ರಯಾಣ ಮುಂದುವರಿಸಬೇಕಾಗಿದೆ. ಹೀಗಾಗಿ ಅಶ್ವಿನ್‌ ಇಂಗ್ಲೆಂಡ್‌ ತಲುಪುದು ತಡವಾಗುವ ಸಾಧ್ಯತೆಗಳಿವೆ. ಹೀಗಾಗಿ ಅವರು ಟೆಸ್ಟ್‌ ಪಂದ್ಯಕ್ಕೆ ಮೊದಲು ಆಯೋಜನೆಗೊಂಡಿರುವ ಲೈಸೆಸ್ಟರ್‌ಶೈರ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.

“ಆರ್‌. ಅಶ್ವಿನ್‌ ಅವರು ಕೊರೊನಾ ಸೋಂಕಿಗೆ ಒಳಗಾಗಿರುವ ಕಾರಣ ಅವರಿಗೆ ಇಂಗ್ಲೆಂಡ್‌ಗೆ ತೆರಳಿದ್ದ ಭಾರತ ತಂಡದ ಜತೆ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ. ಅವರು ಕ್ವಾರಂಟೈನ್‌ಗೆ ಒಳಗಾಗಿ ಮುಂದಿನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಸೋಂಕಿನಿಂದ ಗುಣಮುಖರಾದ ಬಳಿಕ ಪ್ರಯಾಣ ಮುಂದುವರಿಸಲಿದ್ದಾರೆ,ʼʼ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪಂತ್‌, ಶ್ರೇಯಸ್‌ ಪ್ರಯಾಣ

ಜೂನ್‌ ೧೬ರಂದು ಮೊದಲ ತಂಡ ಪ್ರಯಾಣ ಮಾಡಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ದದ ಟಿ೨೦ ಸರಣಿಯಲ್ಲಿ ಪಾಲ್ಗೊಂಡಿದ್ದ ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಜೂನ್‌ ೨೦ರಂದು ಇಂಗ್ಲೆಂಡ್‌ಗೆ ತೆರಳುವ ವಿಮಾನ ಹತ್ತಿದ್ದಾರೆ. ಅವರು ಅದಾಗಲೇ ಇಂಗ್ಲೆಂಡ್‌ ತಲುಪಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕಳೆದ ವರ್ಷ ಆರಂಭಗೊಂಡ ಇಂಗ್ಲೆಂಡ್‌ ಹಾಗೂ ಪ್ರವಾಸಿ ಭಾರತ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿ ನಾಲ್ಕು ಪಂದ್ಯಗಳು ಮುಕ್ತಾಯಗೊಂಡ ತಕ್ಷಣ ಸ್ಥಗಿತಗೊಂಡಿತ್ತು. ಭಾರತ ತಂಡದ ಆಟಗಾರರಿಗೆ ಕೊರೊನಾ ಸೋಂಕಿಗೆ ಒಳಗಾಗಿರುವುದೇ ಸ್ಥಗಿತಗೊಳ್ಳಲು ಕಾರಣ. ಆ ವೇಳ ಭಾರತ ಸರಣಿಯಲ್ಲಿ ೨-೧ ಅಂತರದ ಮುನ್ನಡೆ ಹೊಂದಿತ್ತು. ಬಳಿಕ ಬಿಸಿಸಿಐ ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ ಸಭೆಯ ಬಳಿಕ ೨೦೨೨ರ ಜುಲೈ೧ರಂದು ಪಂದ್ಯ ನಿಗದಿ ಮಾಡಿದೆ. ಕಳೆದ ವರ್ಷ ಪ್ರಯಾಣ ಮಾಡಿದ್ದಾಗ ಅಶ್ವಿನ್‌ ಭಾರತ ತಂಡದಲ್ಲಿ ಇದ್ದರು. ಆದರೆ, ನಾಯಕರಾಗಿದ್ದ ವಿರಾಟ್‌ ಕೊಹ್ಲಿ ಹಿರಿಯ ಸ್ಪಿನ್ನರ್‌ಗೆ ಆಡುವ ೧೧ ಬಳಗದಲ್ಲಿ ಅವಕಾಶ ಕೊಟ್ಟಿರಲಿಲ್ಲ. ಅದು ದೊಡ್ಡ ಚರ್ಚೆಯ ವಿಷಯವಾಗಿತ್ತು.

ಇದನ್ನೂ ಓದಿ: Ind vs Sa T20 | ಬೆಂಗಳೂರು ಮ್ಯಾಚ್‌ಗೆ ಬಂದವರಿಗೆ ಟಿಕೆಟ್‌ನ 50% ದುಡ್ಡು ವಾಪಸ್‌

Exit mobile version