Site icon Vistara News

R Ashwin: 500 ಟೆಸ್ಟ್​ ವಿಕೆಟ್​ ಸಾಧನೆಗೆ ಅಶ್ವಿನ್​ಗೆ ಬೇಕಿದೆ ಬೆರಳೆಣಿಕೆಯ ವಿಕೆಟ್​​

Ravichandran Ashwin

ಹೈದರಾಬಾದ್​: ಟೀಮ್​ ಇಂಡಿಯಾದ ಹಿರಿಯ ಸ್ಪಿನ್​ ಬೌಲರ್​ ರವಿಚಂದ್ರನ್(R Ashwin) ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುವ ತವರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್​ 10 ವಿಕೆಟ್​ ಉರುಳಿಸಿದರೆ ನೂತನ ಮೈಲುಗಲ್ಲೊಂದನ್ನು ತಲುಪಲಿದ್ದಾರೆ.

ಹೌದು, ಆರ್​ ಅಶ್ವಿನ್​ ಅವರು ಇಂಗ್ಲೆಂಡ್​ ಟೆಸ್ಟ್​ನಲ್ಲಿ 10 ವಿಕೆಟ್​ ಕಿತ್ತರೆ 500 ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅನಿಲ್​ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​. ಅನಿಲ್ ಕುಂಬ್ಳೆ ಟೆಸ್ಟ್​ನಲ್ಲಿ 619 ವಿಕೆಟ್ ಪಡೆದಿದ್ದಾರೆ.

37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ 95 ಟೆಸ್ಟ್ ಪಂದ್ಯಗಳನ್ನು ಆಡಿ 490 ವಿಕೆಟ್​ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್​ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆಯೂ ಇವರದ್ದಾಗಿದೆ. 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ತವರಿನಲ್ಲಿ ಉತ್ತಮ ಬೌಲಿಂಗ್​ ದಾಖಲೆ ಹೊಂದಿರುವ ಅಶ್ವಿನ್​ಗೆ 500 ವಿಕೆಟ್​ ಪೂರ್ತಿಗೊಳಿಸುವುದು ಕಷ್ಟವಾಗದು. ಮೊದಲ ಪಂದ್ಯದಲ್ಲೇ ಅವರು 10 ವಿಕೆಟ್​ ಕಿತ್ತು ಈ ದಾಖಲೆ ಬರೆದರೂ ಅಚ್ಚರಿಯಿಲ್ಲ.

ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್


ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) – 800 ವಿಕೆಟ್

ಶೇನ್ ವಾರ್ನ್ (ಆಸ್ಟ್ರೇಲಿಯಾ) – 708 ವಿಕೆಟ್

ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) – 690 ವಿಕೆಟ್

ಅನಿಲ್ ಕುಂಬ್ಳೆ (ಭಾರತ) – 619 ವಿಕೆಟ್

ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) – 604 ವಿಕೆಟ್

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) – 563 ವಿಕೆಟ್

ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) – 519 ವಿಕೆಟ್

ನಾಥನ್ ಲಿಯಾನ್ (ಆಸ್ಟ್ರೇಲಿಯಾ) – 512 ವಿಕೆಟ್

ರವಿಚಂದ್ರನ್ ಅಶ್ವಿನ್ (ಭಾರತ) – 490 ವಿಕೆಟ್

ಡೇಲ್ ಸ್ಟೈನ್​ (ದಕ್ಷಿಣ ಆಫ್ರಿಕಾ) – 439 ವಿಕೆಟ್

ಇದನ್ನೂ ಓದಿ India Open 2024 Final: ಇಂಡಿಯಾ ಓಪನ್​ ಫೈನಲ್​ನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿಗೆ ಸೋಲು

ಧೋನಿ, ಸೆಹವಾಗ್ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್​


ರೋಹಿತ್​ ಶರ್ಮ ಅವರು 5 ಪಂದ್ಯಗಳ ಸರಣಿಯಲ್ಲಿ ಒಟ್ಟು 14 ಸಿಕ್ಸರ್​ ಬಾರಿಸಿದರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್​ ಆಟಗಾರ ವಿರೇಂದ್ರ ಸೆಹವಾಗ್​ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್​ ಪಂದ್ಯ ಆಡಿ 91 ಸಿಕ್ಸರ್​ ಬಾರಿಸಿ ಟೀಮ್​ ಇಂಡಿಯಾ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್​ ಧೋನಿ 78 ಸಿಕ್ಸರ್​ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮ ಅವರು 2 ಸಿಕ್ಸರ್​ ಬಾರಿಸಿದರೆ ಧೋನಿ ದಾಖಲೆ ಪತನಗೊಳ್ಳಲಿದೆ. 14 ಸಿಕ್ಸರ್​ ಬಾರಿಸಿದರೆ ವೀರೇಂದ್ರ ಸೆಹವಾಗ್​ ದಾಖಲೆ ಪತನಗೊಳ್ಳಲಿದೆ. ರೋಹಿತ್​ ಸದ್ಯ 54 ಪಂದ್ಯ ಆಡಿ 77 ಸಿಕ್ಸರ್​ ಬಾರಿಸಿದ್ದಾರೆ.​

Exit mobile version