ಚೆನ್ನೈ: ವಿಶ್ವದ ನಂ.1 ಬೌಲರ್ ಆಗಿದ್ದರೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(Wtc Final 2023) ಪಂದ್ಯದಲ್ಲಿ ಆಡಲು ಅವಕಾಶ ನೀಡದ ಕುರಿತು ಆರ್. ಅಶ್ವಿನ್(R Ashwin) ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಶ್ವಿನ್ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟ ವಿಚಾರದಲ್ಲಿ ಈಗಾಗಲೇ ಬಿಸಿಸಿಐ ವಿರುದ್ಧ ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ತಕ್ತಪಡಿಸಿದ್ದರು. ಇದೀಗ ಸ್ವತಃ ಅಶ್ವಿನ್ ಅವರೇ ಈ ವಿಚಾರವಾಗಿ ಮಾತನಾಡಿದ್ದು ತಮಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದಿಲ್ಲ ಎಂಬುದು 2 ದಿನಗಳ ಮುಂದೆಯೇ ತಿಳಿದಿತ್ತು ಎಂದಿದ್ದಾರೆ.
ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡ 209 ರನ್‌ಗಳ ಹೀನಾಯ ಸೋಲು ಕಾಣುವ ಮೂಲಕ ದ್ವಿತೀಯ ಬಾರಿಗೆ ವಿಶ್ವ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಫೈನಲ್ ಆಡಲು ಅವಕಾಶ ಸಿಗದ ಕುರಿತು ಮಾತನಾಡಿದ ಅಶ್ವಿನ್ “ಖಂಡಿತವಾಗಿಯೂ ಫೈನಲ್ ಪಂದ್ಯ ಆಡುವ ಆಸೆ ನನ್ನಲ್ಲಿಯೂ ಇತ್ತು. ಏಕೆಂದರೆ ತಂಡ ಫೈನಲ್ ತಲುಪಲು ನನ್ನ ಕೊಡುಗೆಯೂ ಅಪಾರವಾಗಿದೆ. ಕಳೆದ ಫೈನಲ್‌ನಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ್ದೆ. ವಿದೇಶಿ ಪಿಚ್‌ಗಳಲ್ಲಿ ನನ್ನ ಬೌಲಿಂಗ್ ಪ್ರದರ್ಶನವೂ ಉತ್ತಮವಾಗಿದೆ. ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದೇನೆ” ಎಂದು ಹೇಳಿದರು.
“ಫೈನಲ್ ಪಂದ್ಯದ ಆಡುವ 11ರ ಬಳಗದಿಂದ ನಾನು ಹೊರಗುಳಿಯಲಿದ್ದೇನೆ ಎಂಬುದು ನನಗೆ 2 ದಿನ ಮೊದಲೇ ತಿಳಿದಿತ್ತು. ಆದರೆ, ನನ್ನ ಗುರಿ ಏನಿದ್ದರೂ ತಂಡಕ್ಕೆ ಯಾವುದಾದರೂ ರೀತಿಯಲ್ಲಿ ಟ್ರೋಫಿ ಗೆಲ್ಲುವಂತೆ ಮಾಡಬೇಕು ಎಂಬುದಾಗಿತ್ತು” ಎಂದು ಹೇಳುವ ಮೂಲಕ ಅಶ್ವಿನ್ ಆಯ್ಕೆ ಸಮಿತಿಯ ಪರ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಬಿಸಿಸಿಐ ವಿರುದ್ಧ ಟೀಕೆ ಮಾಡುವವ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್ ಫೈನಲ್ ಆಡುತ್ತಿರುವ ಭಾರತ ತಂಡಕ್ಕೆ ಹಾರೈಸಿದ ಪಂತ್
ಸದ್ಯ ಅಶ್ವಿನ್ ಅವರು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.