ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದನ್ನು ಸೋತಿರುವ ಭಾರತ ತಂಡ ಈಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ (Visakhapatnam ) ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಿರಿಯ ಆಫ್ ಸ್ಪಿನ್ನರ್, ನಂ.1 ಟೆಸ್ಟ್ ಬೌಲರ್ ಆರ್. ಅಶ್ವಿನ್(Ravichandran Ashwin) ನೂತನ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.
ಅಶ್ವಿನ್ ಅವರು ದ್ವಿತೀಯ ಟೆಸ್ಟ್ನಲ್ಲಿ ಕೇವಲ 4 ವಿಕೆಟ್ ಪಡೆದರೆ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ 619 ವಿಕೆಟ್ ಪಡೆದಿದ್ದಾರೆ. 37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿ 496 ವಿಕೆಟ್ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆಯೂ ಇವರದ್ದಾಗಿದೆ. 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ ind vs eng : ಎರಡನೇ ಟೆಸ್ಟ್ಗೆ ನಾಲ್ಕು ಬಲಿಷ್ಠ ಆಟಗಾರರೇ ಇಲ್ಲ, ಭಾರತ ತಂಡ ಗೆಲ್ಲುವುದು ಹೇಗೆ?
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ ಸೇರಿ ಒಟ್ಟು 6 ವಿಕೆಟ್ ಕಿತ್ತಿದ್ದರು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಅವರಿಗೆ ಕನಿಷ್ಠ 4 ವಿಕೆಟ್ ಕೀಳುವುದು ಕಷ್ಟವಾಗದು. ಫೀಲ್ಡಿಂಗ್ ವಿಚಾರದಲ್ಲಿ ಅಶ್ವಿನ್ ಸುಧಾರಣೆ ಕಾಣಬೇಕಿದೆ. ಮೊದಲ ಪಂದ್ಯದಲ್ಲಿ ಹಲವು ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿ ನಾಯಕ ರೋಹಿತ್ ಶರ್ಮ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳಪೆ ಫೀಲ್ಡಿಂಗ್ ಕೂಡ ಪಂದ್ಯದ ಸೋಲಿಗೆ ಕಾರಣವಾಗುವ ನಿಟ್ಟಿನಲ್ಲಿ ಅವರು ಮುಂದಿನ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್ ನಡೆಸುವ ಅಗತ್ಯವಿದೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ
ಆಟಗಾರ | ದೇಶ | ವಿಕೆಟ್ |
ಮುತ್ತಯ್ಯ ಮುರಳೀಧರನ್ | ಶ್ರೀಲಂಕಾ | 800 |
ಶೇನ್ ವಾರ್ನ್ | ಆಸ್ಟ್ರೇಲಿಯಾ | 708 |
ಜೇಮ್ಸ್ ಆಂಡರ್ಸನ್ | ಇಂಗ್ಲೆಂಡ್ | 690* |
ಅನಿಲ್ ಕುಂಬ್ಳೆ | ಭಾರತ | 619 |
ಸ್ಟುವರ್ಟ್ ಬ್ರಾಡ್ | ಇಂಗ್ಲೆಂಡ್ | 604 |
ಗ್ಲೆನ್ ಮೆಕ್ಗ್ರಾತ್ | ಆಸ್ಟ್ರೇಲಿಯಾ | 563 |
ಕರ್ಟ್ನಿ ವಾಲ್ಷ್ | ವೆಸ್ಟ್ ಇಂಡೀಸ್ | 519 |
ನಾಥನ್ ಲಿಯಾನ್ | ಆಸ್ಟ್ರೇಲಿಯಾ | 512* |
ರವಿಚಂದ್ರನ್ ಅಶ್ವಿನ್ | ಭಾರತ | 495* |
ಡೇಲ್ ಸ್ಟೈನ್ | ದಕ್ಷಿಣ ಆಫ್ರಿಕಾ | 439 |
ಭಾರತದ ಟೆಸ್ಟ್ ದಾಖಲೆ ಹೇಗಿದೆ?
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಮೈದಾನದಲ್ಲಿ ಭಾರತ ತಂಡ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದೆ. ಎದುರಾಳಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್. ಈ 2 ಪಂದ್ಯಗಳನ್ನು ಭಾರತ ಬೃಹತ್ ಮೊತ್ತದ ಅಂತರದಿಂದ ಗೆದ್ದು ಬೀಗಿದೆ. ಇದೀಗ ಮತ್ತೆ ಇಂಗ್ಲೆಂಡ್ ವಿರುದ್ಧ ಇಲ್ಲಿ 2ನೇ ಬಾರಿ ಮುಖಾಮುಖಿಯಾಗಲಿದೆ. ಹೈದರಾಬಾದ್ನಲ್ಲಿ ಅಜೇಯ ದಾಖಲೆ ಹೊಂದಿದ್ದ ಭಾರತಕ್ಕೆ ಸೋಲಿನ ಶಾಕ್ ನೀಡಿದ್ದ ಇಂಗ್ಲೆಂಡ್ ಇದೀಗ ಈ ಸ್ಟೇಡುಯಂನಲ್ಲಿಯೂ ಇದೇ ಫಲಿತಾಂಶವನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.