ನವದೆಹಲಿ: ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್(R Sridhar) ಅವರು ಅಫಘಾನಿಸ್ತಾನ(Afghanistan) ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಶ್ರೀಧರ್ ಆಫ್ಘನ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಶ್ರೀಧರ್ ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರವಿಶಾಸ್ತ್ರಿ ಕೋಚ್ ಆಗಿದ್ದ ವೇಳೆ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಅಫಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ‘ಎ’ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್ಸಿಎ) 2014 ರ ವಿಶ್ವಕಪ್‌ನಲ್ಲಿ ಭಾರತ ಅಂಡರ್-19 ತಂಡದೊಂದಿಗೆ ಮತ್ತು ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೊಂದಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಶ್ರೀಧರ್ ಲೆವೆಲ್-3 ಸರ್ಟಿಫೈಡ್ ಕೋಚ್ ಆಗಿದ್ದಾರೆ. ಸದ್ಯ ಕಿವೀಸ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಮಾತ್ರ ಸಹಾಯಕ ಕೋಚ್ ಆಗಿರುವ ಶ್ರೀಧರ್ ಭವಿಷ್ಯದಲ್ಲಿ ದೀರ್ಘಕಾಲದವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ(Afghanistan Cricket Board) ತನ್ನ ಹೇಳಿಯಲ್ಲಿ ತಿಳಿಸಿದೆ.
ಇದನ್ನೂ ಓದಿ Virat Kohli: ಐಪಿಎಲ್ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್ ಕೊಹ್ಲಿ
ಕೀನ್ಯಾ ತಂಡಕ್ಕೆ ದೊಡ್ಡ ಗಣೇಶ್ ಮುಖ್ಯ ಕೋಚ್
ಕೆಲ ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್(Dodda Ganesh) ಅವರು ಕೀನ್ಯಾ ತಂಡದ(Dodda Ganesh Kenya Head Coach) ಮುಖ್ಯ ಕೋಚ್ ಆಗಿ ನೇಕಮಗೊಂಡಿದ್ದರು. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್ನಲ್ಲಿ ಕಣಕ್ಕಿಳಿಯಲಿದೆ.
50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 104 ಪಂದ್ಯಗಳಿಂದ 365 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್ ಕಿತ್ತಿದ್ದಾರೆ. ಲಿಸ್ಟ್ ‘ಎ’ ಕ್ರಿಕೆಟ್ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಸೇರಿ ಒಟ್ಟು 2,548 ರನ್ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.