Site icon Vistara News

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Rafael Nadal

ಪ್ಯಾರಿಸ್‌: ಪದೇ ಪದೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಸ್ಪೇನ್‌ನ ರಾಫೆಲ್ ನಡಾಲ್(Rafael Nadal)​ ಅವರು 2024ರ ಲೇವರ್‌ ಕಪ್‌(Laver Cup 2024) ಟೆನಿಸ್‌ ಟೂರ್ನಿಯಲ್ಲಿ ಆಡಲಿದ್ದಾರೆ. ಅದೇ ಅವರ ಕೊನೆ ಟೂರ್ನಿಯಾಗುವ(rafael nadal retirement) ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಇದೀಗ ಲೇವರ್‌ ಕಪ್‌ ಟೂರ್ನಿ ನಡಾಲ್​ಗೆ ವಿದಾಯದ ಟೂರ್ನಿಯಾಗುವ ಸಾಧ್ಯತೆ ಇದೆ.

ಇದೇ ವರ್ಷಾರಂಭದಲ್ಲಿ 37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ಚೇತರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು.

ಇದನ್ನೂ ಓದಿ Rafael Nadal: ಫ್ರೆಂಚ್​ ಓಪನ್, ಒಲಿಂಪಿಕ್ಸ್​ ಟೂರ್ನಿಯಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ ನಡಾಲ್​

ಆದರೆ, ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ. ಹೀಗಾಗಿ ಅವರು ಅಂತಿಮ ನಿರ್ಧಾರವೊಂದನ್ನು ಕೈಗೊಂಡಿದ್ದು ಲೇವರ್‌ ಕಪ್‌ ಬಳಿಕ ವಿದಾಯ ಘೋಷಿಸ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಟೆನಿಸ್​ ದಿಗ್ಗಜ ರಫೆಲ್‌ ನಡಾಲ್‌ ಅವರನ್ನು ಐಟಿ ಸಂಸ್ಥೆ ಇನ್ಫೋಸಿಸ್(Infosys) ಬ್ರ್ಯಾಂಡ್‌ ಅಂಬಾಸಿಡರ್(global ambassador) ಆಗಿ ನೇಮಿಸಿತ್ತು. ಮುಂದಿನ ಮೂರು ವರ್ಷಗಳ ಕಾಲ ನಡಾಲ್​ ಅವರು ಇನ್ಫೋಸಿಸ್​ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರಲಿದ್ದಾರೆ.

“ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್​ ಚಾಂಪಿಯನ್​ ಆಗಿರುವ ರಫೆಲ್‌ ನಡಾಲ್‌ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಇನ್ಫೋಸಿಸ್​ನ ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್ ಹೇಳಿದ್ದರು. ಎಟಿಪಿ ಟೂರ್, ರೋಲ್ಯಾಂಡ್-ಗ್ಯಾರೋಸ್, ಆಸ್ಟ್ರೇಲಿಯನ್ ಓಪನ್ ಮತ್ತು ಸೇರಿ ಟೆನಿಸ್ ಹಾಲ್ ಆಫ್ ಫೇಮ್‌ಗೆ ಡಿಜಿಟಲ್ ಇನ್ನೋವೇಶನ್ ಪಾಲುದಾರರಾಗಿ, ಬ್ರಾಂಡ್ ಇನ್ಫೋಸಿಸ್ ಜಾಗತಿಕವಾಗಿ ಎಐ, ಕ್ಲೌಡ್, ಡೇಟಾವನ್ನು ಬಳಸಿಕೊಂಡು ಒಂದು ಬಿಲಿಯನ್ ಅಭಿಮಾನಿಗಳಿಗೆ ಟೆನಿಸ್​ ಕುರಿತ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ಪ್ರಕಟಿಸಿತ್ತು.

Exit mobile version