Site icon Vistara News

Rahul Dravid | ಬಿಸಿಸಿಐ ಬದಲಾಗಬೇಕಿದೆ; ಕೋಚ್ ರಾಹುಲ್​​ ದ್ರಾವಿಡ್​​ ಹೀಗೆ ಹೇಳಿದ್ದು ಯಾಕೆ?

t20

ಅಡಿಲೇಡ್​: ಟಿ20 ವಿಶ್ವ ಕಪ್‌ನ (T20 World Cup 2022) ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ಗಳಿಂದ ಹೀನಾಯವಾಗಿ ಸೋತು ಕೂಟದಿಂದಲೇ ಹೊರಬಿದ್ದಿದೆ. ಭಾರತದ ಈ ಸೋಲಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇದೆಲ್ಲದರ ನಡುವೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), ಬಿಸಿಸಿಐ ಮೇಲೆ ಗಂಭೀರ ಆರೋಪ ಹೊರಿಸಿದ್ದು, ಮಂಡಳಿಯು ಭವಿಷ್ಯದಲ್ಲಿ ಕೆಲ ವಿಚಾರದಲ್ಲಿ ಬದಲಾವಣೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿದೇಶಿ ಲೀಗ್‌ಗಳಲ್ಲಿ ಆಡುವುದರಿಂದ ನಮ್ಮ ಆಟಗಾರರಿಗೆ ಸಹಾಯವಾಗುತ್ತದೆ. ಈ ಬಗ್ಗೆ ಚಿಂತನೆ ನಡೆಸುವುದು ಬಿಸಿಸಿಐ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳುವ ಮೂಲಕ ಬಿಸಿಸಿಐ ನಿಲುವನ್ನು ಪ್ರಶ್ನಿಸಿದ್ದಾರೆ.

ಭಾರತದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್​ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡುತ್ತಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ಗಳಲ್ಲಿಯೂ ಆಡಿದ್ದಾರೆ. ಇದರ ಲಾಭ ಪಡೆದ ಉಭಯ ಆಟಗಾರರು ಭಾರತ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಲು ಸಾಧ್ಯವಾಯಿತು. ವಿದೇಶಿ ಲೀಗ್‌ಗಳಲ್ಲಿ ಆಡುವ ಮೂಲಕ ಆಟಗಾರರಿಗೆ ಆ ದೇಶದ ಪರಿಸ್ಥಿತಿಗಳು ಮತ್ತು ಪಿಚ್‌ಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಇದು ಐಸಿಸಿ ಪಂದ್ಯಾವಳಿಗಳಲ್ಲಿ ಸಹಾಯಕ್ಕೆ ಬರುತ್ತದೆ. ಆದ್ದರಿಂದ ಭಾರತೀಯ ಆಟಗಾರರಿಗೂ ವಿದೇಶಿ ಲೀಗ್​ಗಳಲ್ಲಿ ಬಿಸಿಸಿಐ ಆಡಲು ಅನುಮತಿ ನೀಡಬೇಕೆಂದು ದ್ರಾವಿಡ್​ ಪರೋಕ್ಷವಾಗಿ ಹೇಳಿದ್ದಾರೆ.

ಸೋಲು ಕ್ರೀಡೆಯ ಒಂದು ಭಾಗ

ಹತ್ತು ವಿಕೆಟ್​ ಅಂತರದ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ಕ್ರಿಕೆಟ್​ನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಸೋಲಿನಿಂದ ನನಗೆ ಖಂಡಿತ ನಿರಾಸೆಯಾಗಿದೆ. ಆದರೂ ವಾಸ್ತವವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು ಏಕೆಂದರೆ ಸೋಲು ಗೆಲುವು ಎನ್ನುವುದು ಕ್ರೀಡೆಯ ಒಂದು ಭಾಗ ಇದನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ದ್ರಾವಿಡ್​ ತಿಳಿಸಿದರು.

ಇದನ್ನೂ ಓದಿ | IND vs ENG | ಟಿ20 ವಿಶ್ವ ಕಪ್‌ನಲ್ಲಿ ಬಟ್ಲರ್‌- ಅಲೆಕ್ಸ್‌ ಹೇಲ್ಸ್‌ ವಿಶ್ವ ದಾಖಲೆ, ಓಪನರ್‌ಗಳ ಸಾಧನೆಯೇನು?

Exit mobile version