ನ್ಯೂಯಾರ್ಕ್: ರಾಹುಲ್ ದ್ರಾವಿಡ್(Rahul Dravid) ಅವರ ಕೋಚಿಂಗ್ ಅವಧಿ ಟಿ20 ವಿಶ್ವಕಪ್(T20 world cup 2024) ಬಳಿಕ ಅಂತ್ಯಗೊಳ್ಳಲಿದೆ. ಈಗಾಗಲೇ ನೂತನ ಕೋಚ್(team india coach) ಆಗಿ ಗೌತಮ್ ಗಂಭೀರ್(Gautam Gambhir) ಅವರು ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ದ್ರಾವಿಡ್ ಅವರು ಮುಂದಿನ ಬಾರಿಗೆ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ತಮಗಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹೀಗಾಗಿ ಗಂಭೀರ್ ಕೋಚ್ ಆಗುವುದು ಬಹುತೇಖ ಖಚಿತ ಎನ್ನಬಹುದು.
ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಗಲಿಲ್ಲ.
ದ್ರಾವಿಡ್ ಮಾರ್ಗದರ್ಶನದಲ್ಲಿ ಏಷ್ಯಾಕಪ್ 2022, ಐಸಿಸಿ ಟಿ20 ವಿಶ್ವಕಪ್, ಐಸಿಸಿ ವಿಶ್ವಕಪ್ ಟೆಸ್ಟ್, ಏಕದಿನ ವಿಶ್ವಕಪ್ನಲ್ಲಿ ತಂಡ ಗೆಲ್ಲಲು ವಿಫಲವಾಗಿತ್ತು. ದ್ರಾವಿಡ್ಗೆ ಟೀಮ್ ಇಂಡಿಯಾದ ಕೋಚಿಂಗ್ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇರಲಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ದ್ರಾವಿಡ್ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಕೋಚಿಂಗ್ ನಡೆಸುತ್ತಿರುವ ದ್ರಾವಿಡ್ ಟಿ20 ವಿಶ್ವಕಪ್ನಲ್ಲಾದರೂ ಕಪ್ ಗೆದ್ದು ಗೆಲುವಿನ ವಿದಾಯ ಸಿಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ Team India Coach: ಅಭಿಮಾನಿಗಳು ಬಯಸಿದರೂ ಕೋಚ್ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಗಂಭೀರ್ ಮುಂದಿನ ಕೋಚ್
ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ವೇಳೆಯೇ ಗಂಭೀರ್ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿತು. ಇದಾದ ಬಳಿಕವಂತೂ ಕೋಚ್ ಆಗುವ ಮಾತಿಗೆ ಇನ್ನಷ್ಟು ಪುಷ್ಟಿಸಿಕ್ಕಿತು. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಗಂಭೀರ್ ಜತೆ ಬಹಳ ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೀಗ ಇಂಡಿಯಾ ಟುಡೆ ಗಂಭೀರ್ ಕೋಚ್ ಆಗುವು ನಿಶ್ಚಿತ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗಂಭೀರ್ ಐಪಿಎಲ್ನಲ್ಲಿ ಮೂರು ಸೀಸನ್ಗಳಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.