ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಏಕ ದಿನ ಸರಣಿಯನ್ನು ಭಾರತ ತಂಡ 1-2 ಅಂತರದಿಂದ ಕಳೆದುಕೊಂಡಿದೆ. ಹೀಗಾಗಿ ಭಾರತ ತಂಡದ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸೋಲಿಗೆ ಬ್ಯಾಟರ್ಗಳು ಕಾರಣವಾಗಿದ್ದರೂ ಟೀಮ್ ಇಂಡಿಯಾ ನಾಯಕನ ಬೌಲಿಂಗ್ ಆಯ್ಕೆಯ ಕುರಿತೂ ವಿಶ್ಲೇಷಣೆಗಳು ನಡೆಯುತ್ತಿವೆ. ಪ್ರಮುಖವಾಗಿ ಸ್ಪಿನ್ನರ್ಗಳು ಫೀಲ್ಡಿಂಗ್ಗೆ ಪೂರಕವಾಗಿ ಬೌಲಿಂಗ್ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಎದುರಾಳಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ಗಳು ನಾಯಕನ ತೀರ್ಮಾನಕ್ಕೆ ತಕ್ಕುದಾಗಿ ಬೌಲಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದು ಸ್ಪಿನ್ ಬೌಲಿಂಗ್ ಕೋಚ್ಗಳ ಬದ್ಧತೆಯನ್ನೂ ಪ್ರಶ್ನಿಸಿದೆ. ಇಂಥ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಭಾರತ ತಂಡದ ಮಾಜಿ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್, ತಮ್ಮನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡದಿರುವ ವಿಷಯವನ್ನು ಬಹಿರಂಗ ಮಾಡಿದ್ದಾರೆ.
ಶಿವರಾಮಕೃಷ್ಣನ್ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಹಿರಿಯ ಆಟಗಾರ. ಅವರು ಪ್ರಸ್ತುತ ಕ್ರಿಕೆಟ್ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ. ಸ್ಪಿನ್ ಬೌಲಿಂಗ್ನಲ್ಲಿ ದೊಡ್ಡ ಸಾಧನೆ ಮಾಡಿರುವ ಅವರು ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಲು ಮನಸ್ಸು ಮಾಡಿದ್ದರು. ಆದರೆ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಅವರ ಆಫರ್ ನಿರಾಕರಿಸಿದ್ದರು. ಈ ವಿಷಯವನ್ನು ಶಿವರಾಮಕೃಷ್ಣನ್ ಅವರು ಟ್ವೀಟ್ ಮೂಲಕ ಬಹಿರಂಗ ಮಾಡಿದ್ದಾರೆ.
ಲೆಗ್ಸ್ಪಿನ್ನರ್ ಸಾಯಿರಾಜ್ ಬಹುತುಳೆ ಈಗ ಭಾರತ ತಂಡದ ಸ್ಪಿನ್ ಬೌಲಿಂಗ್ ಕೋಚ್. ಆಸ್ಟ್ರೇಲಿಯಾ ತಂಡ ಪ್ರವಾಸ ಬರುವ ಮೊದಲು ಸಾಯಿರಾಜ್ ಬಹುತುಳೆ ಹುದ್ದೆ ವಹಿಸಿಕೊಂಡಿದ್ದರು. ಆದರೆ, ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-1 ಅಂತರದಿಂದ ವಿಜಯ ಸಾಧಿಸಿದ್ದರೆ ಏಕ ದಿನ ಸರಣಿಯಲ್ಲಿ ಭಾರತ ತಂಡ ಸೋಲು ಕಂಡಿದೆ.
ಟ್ವಿಟರ್ ಬಳಕೆದಾರರೊಬ್ಬರು, ಕುಲ್ದೀಪ್ ಯಾದವ್ ಫೀಲ್ಡರ್ಗಳು ಇರುವ ಕಡೆ ಬೌಲಿಂಗ್ ಮಾಡುತ್ತಿರಲಿಲ್ಲ. ಅವರು ಫೀಲ್ಡರ್ಗಳ ಸೇವೆಯನ್ನು ಬಳಸಿಲ್ಲ. ಆದರೆ ಆಸ್ಟ್ರೇಲಿಯಾದ ಸ್ಪಿನ್ನರ್ಗಳಾದ ಆಡಂ ಜಂಪಾ ಹಾಗೂ ಆಸ್ಟನ್ ಅಗರ್ ಫೀಲ್ಡಿಂಗ್ಗೆ ಪೂರಕವಾಗಿ ಬೌಲಿಂಗ್ ಮಾಡಿ ಕ್ರಮವಾಗಿ 4 ಹಾಗೂ 2 ವಿಕೆಟ್ ಪಡೆದಿದ್ದಾರೆ ಎಂದು ಬರೆದಿದ್ದರು. ಅದನ್ನು ಶಿವರಾಮಕೃಷ್ಣ ಅವರಿಗೆ ಟ್ಯಾಗ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ನಾನು ರಾಹುಲ್ ದ್ರಾವಿಡ್ ಅವರ ಬಳಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆಯನ್ನು ನೀಡುವಂತೆ ಕೋರಿಕೊಂಡಿದ್ದೆ. ಆದರೆ, ಅವರು ತುಂಬಾ ಹಿರಿಯರಾಗಿರುವ ನಿಮ್ಮ ಜತೆ ಕೆಲಸ ಮಾಡುವುದಕ್ಕೆ ನನಗೆ ಸಾಧ್ಯವಿಲ್ಲ ಎಂದು ಹೇಳಿದರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : IPL 2023 : ವರ್ಕ್ಲೋಡ್ ಮ್ಯಾನೇಜ್ ಮಾಡಿ, ಸಹ ಆಟಗಾರರಿಗೆ ರೋಹಿತ್ ಶರ್ಮಾ ಸಲಹೆ
ಶಿವರಾಮಕೃಷ್ಣನ್ ಅವರು 9 ಟೆಸ್ಟ್ ಪಂದ್ಯ ಹಾಗೂ 16 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದೇ ರೀತಿ 76 ಪ್ರಥಮ ದರ್ಜೆ ಪಂದ್ಯಗಳಲ್ಲಿ 154 ವಿಕೆಟ್ ಕಬಳಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ಸೋಲು ಭಾರತ ತಂಡಕ್ಕೆ ಆಘಾತ ತಂದಿದೆ. ಬೌಲಿಂಗ್ ವಿಭಾಗದಲ್ಲಿ ದೊಡ್ಡ ತಪ್ಪುಗಳು ನಡೆಯದಿದ್ದರೂ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಕೈಕೊಟ್ಟಿತು. ಅದರಲ್ಲೂ ಮಧ್ಯಮ ಕ್ರಮಾಂಕ ಬಲ ಕಳೆದುಕೊಂಡು ಆಡಿತ್ತು.