ಮುಂಬೈ: ಯುಎಇಯಲ್ಲಿ ಆಗಸ್ಟ್ ೨೭ರಿಂದ ಆರಂಭವಾಗುವ ಏಷ್ಯಾಕಪ್ (Asia Cup) ಕ್ರಿಕೆಟ್ ಟೂರ್ನಿ ಮೇಲೆ ಎಲ್ಲರ ಗಮನವಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೊರೊನಾ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಆದರೆ, ದ್ರಾವಿಡ್ ಅವರು ಒಂದೆರಡು ಪ್ಯಾರಾಸೆಟಮಾಲ್ ಮಾತ್ರೆ ಸೇವಿಸಿ, ಮೂರ್ನಾಲ್ಕು ದಿನದಲ್ಲಿ ತಂಡಕ್ಕೆ ಹಿಂದಿರುಗಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
“ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ದೃಢಪಟ್ಟಿದೆ ಎಂದರೆ ಜಾಸ್ತಿ ಹೆದರಬೇಕಿಲ್ಲ. ಈಗ ನಾವು ಅದನ್ನು ಕೋವಿಡ್-೧೯ ಎಂದು ಕರೆಯುವ ಬದಲು, ಅದನ್ನು ಜ್ವರ ಎಂದು ಕರೆಯಬೇಕು. ಹಾಗಾಗಿ, ದ್ರಾವಿಡ್ ಅವರು ಒಂದೆರಡು ಮಾತ್ರೆ ಸೇವಿಸಿ, ಮೂರ್ನಾಲ್ಕು ದಿನದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಗಸ್ಟ್ ೨೮ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ತಮಗೆ ಕೊರೊನಾ ದೃಢಪಟ್ಟಿದ್ದು, ಅದರಿಂದ ಅವರು ಹೊರಬಂದಿದ್ದನ್ನು ರವಿ ಶಾಸ್ತ್ರಿ ಸ್ಮರಿಸಿದರು. “ಕಳೆದ ವರ್ಷ ಇಂಗ್ಲೆಡ್ ಪ್ರವಾಸದಲ್ಲಿದ್ದಾಗ ನನಗೆ ಸೋಂಕು ತಗುಲಿತು. ಒಂದಷ್ಟು ಆಟಗಾರರಿಗೂ ಸೋಂಕು ತಗುಲಿತ್ತು. ಹಾಗೆ, ನೋಡಿದರೆ ನಾನು ಆರೇಳು ದಿನದಲ್ಲಿ ಗುಣಮುಖನಾಗಬೇಕಿತ್ತು. ನಾನು ಗುಣಮುಖನಾಗಿ ಡ್ರೆಸ್ಸಿಂಗ್ ರೂಮ್ ಸೇರಿದ್ದರೆ, ಓಲ್ಡ್ ಟ್ರ್ಯಾಫರ್ಡ್‌ನಲ್ಲಿ ಟೆಸ್ಟ್ ಆಡಿದ್ದರೆ, ಟೆಸ್ಟ್ ಸರಣಿಯನ್ನು ೩-೧ ಅಂತರದಲ್ಲಿ ಗೆಲ್ಲುತ್ತಿದ್ದೆವು” ಎಂದು ಹೇಳಿದ್ದಾರೆ.
ಇದನ್ನೂ ಓದಿ | Virat Kohli | ಏಷ್ಯಾ ಕಪ್‌ಗೆ ಕಿಂಗ್ ಕೊಹ್ಲಿ ಸಜ್ಜು, ಜಿಮ್‌ನಲ್ಲಿ ಭರ್ಜರಿ ವರ್ಕೌಟ್!