ಬೆಂಗಳೂರು: ಟೀಮ್ ಇಂಡಿಯಾದ ಮುಖ್ಯ ಕೋಚ್ ಹಾಗೂ ಮಾಜಿ ಆಟಗಾರ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಕರ್ನಾಟಕ ಅಂಡರ್ 19 ತಂಡದಲ್ಲಿ (Under 19 Karnataka) ಸ್ಥಾನ ಪಡೆದಿದ್ದಾರೆ. ವಿನೂ ಮಂಕಡ್(Vinoo Mankad Trophy) ಟೂರ್ನಿಗಾಗಿ ಆಯ್ಕೆ ಮಾಡಲಾದ ಕರ್ನಾಟಕ 15 ಸದಸ್ಯರ ತಂಡದಲ್ಲಿ ಸಮಿತ್ ಸ್ಥಾನ ಪಡೆದಿದ್ದಾರೆ. ಜತೆಗೆ ತಂದೆಯಂತೆ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಲು ಮುಂದಾಗಿದ್ದಾರೆ.
ತಂದೆಯಂತೆ ಕ್ರಿಕೆಟ್ ಹಾದಿ ಹಿಡಿದ ಮಕ್ಕಳು
ದ್ರಾವಿಡ್ ಅವರ ಇಬ್ಬರು ಮಕ್ಕಳು ಕೂಡ ತಂದೆಯಂತೆ ಕ್ರಿಕೆಟ್ ಹಾದಿಯನ್ನೇ ಹಿಡಿದಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಈಗಾಗಲೇ ಕ್ರಿಕೆಟ್ನಲ್ಲಿ ಕೆಲ ಸಾಧನೆಯನ್ನು ಮಾಡಿ ಮಿಂಚಿದ್ದಾರೆ. ಸಮಿತ್ ಈ ಹಿಂದೆ ಅಂಡರ್-14 ತಂಡದಲ್ಲಿ ಆಡಿದ್ದರು. ಈ ಬಾರಿಯ ವಿನೂ ಮಂಕಡ್ (Vinoo Mankad) ಟೂರ್ನಿ ಅಕ್ಟೋಬರ್ 12 ರಿಂದ ಆರಂಭವಾಗಲಿದ್ದು, ಕರ್ನಾಟಕ ತಂಡವನ್ನು ಧೀರಜ್ ಗೌಡ ಮುನ್ನಡೆಸಲಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ನಡೆದಿದ್ದ 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಅಂಡರ್ 14 ಕರ್ನಾಟಕ ತಂಡದ ನಾಯಕರಾಗಿದ್ದರು. ಇದಲ್ಲದೆ 2019-20ರ ಅಂತರ ವಲಯ ಪಂದ್ಯಗಳಲ್ಲಿ ಅನ್ವಯ್ 2 ದ್ವಿಶತಕ ಹೊಡೆದು ಮಿಂಚಿದ್ದರು. ಅನ್ವಯ್ ಮತ್ತು ಸಮಿತ್ ಹಂತ ಹಂತವಾಗಿ ಕ್ರಿಕೆಟ್ನಲ್ಲಿ ಬೆಳೆದು ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರು ಅಚ್ಚರಿಯಿಲ್ಲ.
ವಿಶ್ವಕಪ್ ಬಳಿಕ ಕೋಚಿಂಗ್ ಹುದ್ದೆಗೆ ರಾಜೀನಾಮೆ
ಏಕದಿನ ವಿಶ್ವ ಕಪ್(ICC World Cup) ಬಳಿಕ ರಾಹುಲ್ ದ್ರಾವಿಡ್ ಕೋಚಿಂಗ್ ಹುದ್ದೆಯಲ್ಲಿ(Team India Coach) ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ವಿಶ್ವ ಕಪ್ ಬಳಿಕ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ಅವರು ಗುತ್ತಿಗೆ ಅವಧಿ ಮುಂದುವರಿಯುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಕ್ಕಿಲ್ಲ.
ಇದನ್ನೂ ಓದಿ Rahul Dravid: ವಿಶ್ವ ಕಪ್ ಬಳಿಕ ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆ!
ದ್ರಾವಿಡ್ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ಬಳಿಕ ಏಷ್ಯಾಕಪ್ 2022, ಐಸಿಸಿ ಟಿ20 ವಿಶ್ವಕಪ್, ಐಸಿಸಿ ವಿಶ್ವಕಪ್ ಟೆಸ್ಟ್ ಪಂದ್ಯದಲ್ಲಿಯೂ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಹೀಗಾಗಿ ದ್ರಾವಿಡ್ ಅವರು ಏಕದಿನ ವಿಶ್ವ ಕಪ್ ಬಳಿಕ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ. ದ್ರಾವಿಡ್ ಮಾರ್ಗದರ್ಶನದಲ್ಲಿ ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವಂತಾಗಲಿ ಎನ್ನುವುದು ದ್ರಾವಿಡ್ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.