Site icon Vistara News

Rahul Dravid: ಅಯ್ಯರ್​- ಕಿಶನ್ ವಿಚಾರದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಕೋಚ್​ ದ್ರಾವಿಡ್​!

Rahul Dravid

ಧರ್ಮಶಾಲಾ: 2 ವಾರಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗಾಗಿ ಕೇಂದ್ರ ಗುತ್ತಿಗೆ(BCCI Annual Contract) ಪಡೆದ ಆಟಗಾರರ ಪಟ್ಟಿಯನ್ನು ಪ್ರಕಟಿಸಿತ್ತು. ಈ ಪಟ್ಟಿಯಿಂದ ಇಶಾನ್​ ಕಿಶನ್(Ishan Kishan)​ ಮತ್ತು ಶ್ರೇಯಸ್​​ ಅಯ್ಯರ್(Shreyas Iyer)​ ಅವರನ್ನು ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಟೀಮ್​ ಇಂಡಿಯಾ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​(Rahul Dravid) ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಶಾಲಾ ಟೆಸ್ಟ್ ಗೆಲುವಿನ ಬಳಿಕ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ ಅವರು ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂದ ಮಾತ್ರಕ್ಕೆ ಅವರು ತಂಡದಿಂದಲೇ ಹೊರಗುಳಿಯಲಿದ್ದಾರೆ ಎನ್ನುವುದು ಸುಳ್ಳು. ಉಭಯ ಆಟಗಾರರು ಕೂಡ ತಂಡದ ಭಾಗವಾಗಿದ್ದಾರೆ. ದೇಶೀಯ ಕ್ರಿಕೆಟ್ ಆಡುವವರು ಯಾವಾಗಲೂ ತಂಡದ ಭಾಗವಾಗಿರುತ್ತಾರೆ. ಕೇಂದ್ರ ಒಪ್ಪಂದದಿಂದ ಈ ಇಬ್ಬರು ಆಟಗಾರರನ್ನು ಕೈಬಿಡುವಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ಹೇಳಿದರು.

“ಯಾವ ಆಟಗಾರನಿಗೆ ಗುತ್ತಿಗೆ ಸಿಗುತ್ತದೆ ಎಂಬುದನ್ನು ನಿರ್ಧರಿಸುವವನು ನಾನಲ್ಲ. ಮಂಡಳಿ ಮತ್ತು ಆಯ್ಕೆದಾರರು ಇದನ್ನು ನಿರ್ಧರಿಸುತ್ತಾರೆ. ಒಪ್ಪಂದದ ಮಾನದಂಡವೂ ನನಗೆ ತಿಳಿದಿಲ್ಲ. 15 ಆಟಗಾರರ ತಂಡವನ್ನು ಆಯ್ಕೆ ಮಾಡುವಾಗ ಮಾತ್ರ ನನ್ನ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ. ಸರಣಿ ಮತ್ತು ಪಂದ್ಯವೊಂದಕ್ಕೆ ತಂಡವನ್ನು ಆಯ್ಕೆ ಮಾಡುವಾಗ ನನ್ನ ಮತ್ತು ನಾಯಕನ ಪಾತ್ರ ಮುಖ್ಯವಾಗಿರುತ್ತದೆ. ಇದು ಹೊರತುಪಡಿಸಿ ವೇತನ, ಇನ್ನಿತರ ವಿಚಾರದಲ್ಲಿ ನನನಗೆ ಯಾವುದೇ ಪಾತ್ರ ಮತ್ತು ಅಧಿಕಾರವಿಲ್ಲ” ಎಂದು ದ್ರಾವಿಡ್​ ಖಚಿತಪಡಿಸಿದರು.

ಇದನ್ನೂ ಓದಿ R Ashwin : ಸ್ಪಿನ್​ ಲೆಜೆಂಡ್​ ಮುರಳೀಧರನ್​ ದಾಖಲೆಯನ್ನೂ ಅಳಿಸಿದ ಅಶ್ವಿನ್​ ಕೈಚಳಕ

ವೇತನ ಶ್ರೇಣಿ ಹೇಗೆ?


ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ ಅಂದರೆ 12 ತಿಂಗಳಿಗೆ ಅನ್ವಯವಾಗುವಂತೆ ವೇತನ ಒಪ್ಪಂದವನ್ನು ನೀಡುತ್ತದೆ. ಈ ಒಪ್ಪಂದದ ಪ್ರಕಾರ ಆಟಗಾರರು ಈ ವರ್ಷದಲ್ಲಿ ಭಾರತ ಪರ ಆಡಲಿ ಅಥವಾ ಇಲ್ಲದಿರಲಿ ಅವರಿಗೆ ನಿಗದಿಪಡಿಸಿದ ಮೊತ್ತವನ್ನು ಬಿಸಿಸಿಐ ನೀಡುತ್ತದೆ. ಅದಂರಂತೆ ಬಿಸಿಸಿಐ ನಾಲ್ಕು ಗ್ರೇಡ್​ಗಳಾಗಿ ಆಟಗಾರರನ್ನು ವಿಂಗಡಿಸುತ್ತದೆ. A+ ಗ್ರೇಡ್​ ಪಡೆದ ಆಟಗಾರರು ವರ್ಷಕ್ಕೆ 7 ಕೋಟಿ ರೂ. ಮೊತ್ತ ಪಡೆದರೆ, A ಗ್ರೇಡ್​ ಆಟಗಾರರು 5 ಕೋಟಿ ರೂ, B ಗ್ರೇಡ್​ ಆಟಗಾರರು 3 ಕೋಟಿ ಮತ್ತು C ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು

ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Exit mobile version