ಕೊಲಂಬೊ: ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಈಗ ಫುಲ್ ಫಿಟ್ ಆಗಿದ್ದಾರೆ. ಭಾನುವಾರ ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(IND vs PAK) ವಿರುದ್ಧ ಅವರು ಆಡುವುದು ಖಚಿತವಾಗಿದೆ. ಅಲ್ಲದೆ ಅವರ ಕ್ರಮಾಂಕದ ಬಗ್ಗೆಯೂ ತಂಡದ ನಾಯಕ ರೋಹಿತ್ ಶರ್ಮ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಇನಿಂಗ್ಸ್ ಆರಂಭ
ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಸೋಮವಾರ ಅವರು ಫಿಟ್ನೆಸ್ ಪಾಸ್ ಆಗಿ ಶ್ರೀಲಂಕಾಕ್ಕೆ ತೆರಳಿದ್ದರು. ಶಕ್ರವಾರ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಇದೀಗ ರೋಹಿತ್ ಶರ್ಮ ಅವರು ರಾಹುಲ್ ಪಾಕಿಸ್ತಾನ ವಿರುದ್ಧ ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕೀಪಿಂಗ್ ಮಾತ್ರ ಇಶಾನ್ ಕಿಶನ್ ನಡೆಸುವುದಾಗಿ ತಿಳಿಸಿದ್ದಾರೆ.
ಗಿಲ್ಗೆ ಮೂರನೇ ಕ್ರಮಾಂಕ
ರೋಹಿತ್ ಶರ್ಮ ಜತೆ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದ ಶುಭಮನ್ ಗಿಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿರುವುದಾಗಿ ರೋಹಿತ್ ತಿಳಿಸಿದ್ದಾರೆ. ಗಿಲ್ ಅವರು ರಾಹುಲ್ ಅವರಿಗೆ ಆರಂಭಿಕ ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದ್ದು, ಇದೇ ವಿಚಾರವಾಗಿ ಗಿಲ್ ರಾಹುಲ್ ಜತೆ ಚರ್ಚಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಆಡಲಿದ್ದಾರೆ ಎಂದು ರೋಹಿತ್ ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.
ಮಂಗಳವಾರ ಪಕಟಗೊಂಡ ವಿಶ್ವಕಪ್ ತಂಡದಲ್ಲಿಯೂ ರಾಹುಲ್ ಅವರು ಮೊದಲ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದರು. ಇದೇ ವೇಳೆ ಮಾತನಾಡಿದ್ದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, ಕೆ.ಎಲ್ ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ. ಅವರು ಈಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ KL Rahul : ಟೀಮ್ ಇಂಡಿಯಾ ಆಯ್ಕೆದಾರರಿಗೆ ನೆಮ್ಮದಿ, ಪ್ರಮುಖ ಆಟಗಾರ ಫುಲ್ ಫಿಟ್
ಶಾರ್ದೂಲ್ಗೆ ಕೊಕ್
ರಾಹುಲ್ ಅವರು ಪಾಕ್ ವಿರುದ್ಧ ಆಡುವುದು ಖಚಿತವಾದ ಕಾರಣ ಯಾರನ್ನು ತಂಡದಿಂದ ಕೈಬಿಡಬೇಕು ಎನ್ನುವುದು ದೊಡ್ಡ ಚಿಂತೆಯಾಗಿದೆ. ಮೂಲಗಳ ಪ್ರಕಾರ ಶಾರ್ದೂಲ್ ಠಾಕೂರ್ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗುವುದು ಎಂದು ತಿಳಿದು ಬಂದಿದೆ. ಕಾರಣ ಅವರನ್ನು ಹೆಚ್ಚುವರಿ ಬ್ಯಾಟರ್ ಆಗಿ ಕಳೆದ ಎರಡು ಪಂದ್ಯದಲ್ಲಿ ಆಡಿಸಲಾಗಿತ್ತು. ಆದರೆ ಅವರು ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ಕೈಬಿಡುವುದು ಖಚಿತವಾಗಿದೆ. ಜಸ್ಪ್ರೀತ್ ಬುಮ್ರಾ ಅವರ ಆಗಮನದಿಂದ ಮೊಹಮ್ಮದ್ ಶಮಿ ಜಾಗ ಬಿಡಬೇಕಾಗಿದೆ.
ಸಂಭಾವ್ಯ ಭಾರತ ತಂಡ
ಕೆ.ಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್ (ವಿಕೆಟ್ ಕೀಪರ್).