Site icon Vistara News

Ashes 2023 : 3ನೇ ದಿನದಾಟಕ್ಕೆ ಮಳೆಯ ಅಡ್ಡಿ; ಸಮತೋಲನದಲ್ಲಿ ಮೊದಲ ಟೆಸ್ಟ್

The Ashes 2023

#image_title

ಎಜ್​ಬಾಸ್ಟನ್​: ಆ್ಯಶಸ್​ ಸರಣಿ 2023ರ (Ashes 2023) ಮೊದಲ ಪಂದ್ಯ ಸಮತೊಲನದಲ್ಲಿದೆ. ಪಂದ್ಯದ ಮೂರನೇ ದಿನ ಪ್ರವಾಸಿ ಆಸ್ಟ್ರೇಲಿಯಾ ತಂಡ 386 ರನ್​ಗಳಿಗೆ ಆಲ್​ಔಟ್​ ಆಯಿತು. ಆ ಬಳಿಕ ಬ್ಯಾಟ್​ ಮಾಡಿದ ಇಂಗ್ಲೆಂಡ್​ ತಂಡ ಮೊದಲೆರಡು ವಿಕೆಟ್​ಗಳನ್ನು ಕಳೆದುಕೊಂಡು 28 ರನ್​ ಬಾರಿಸಿದೆ. ಈ ಮೂಲಕ ಆತಿಥೇಯ ತಂಡ 35 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮೂರನೇ ದಿನ ಮಳೆ ಪಂದ್ಯಕ್ಕೆ ಅಡಚಣೆ ಉಂಟು ಮಾಡಿತು.

ಆಸ್ಟ್ರೇಲಿಯಾ ತಂಡ ಪಂದ್ಯದ ಎರಡನೇ ದಿನವಾದ ಶನಿವಾರ 311 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಅಲೆಕ್ಸ್ ಕ್ಯೇರಿ (52) ಮತ್ತು ಉಸ್ಮಾನ್ ಖವಾಜಾ (126) ಕ್ರೀಸ್ ನಲ್ಲಿದ್ದರು. ಅವರಿಬ್ಬರೂ ಮೂರನೇ ದಿನ ತಮ್ಮ 91 ರನ್​​ಗಳ ಜೊತೆಯಾಟವನ್ನು ಮುಂದುವರಿಸಿದರು. ಆದಾಗ್ಯೂ ಒಲಿ ರಾಬಿನ್ಸನ್​ ಖ್ವಾಜಾ ಅವರನ್ನು 141 ರನ್​ಗಳಿಗೆ ಬೌಲ್ಡ್​ ಮಾಡಿದರು. ಈ ಮೂಲಕ ಕ್ಯೇರಿ ಮತ್ತು ಖವಾಜಾ ನಡುವಿನ 118 ರನ್ ಗಳ ಜೊತೆಯಾಟ ಮುಗಿಯಿತು. ಬಳಿಕ ಕ್ಯೇರಿ ಆ್ಯಂಡರ್ಸನ್​ಗೆ ವಿಕೆಟ್ ಒಪ್ಪಿಸಿದರು. ನಾಯಕ ಪ್ಯಾಟ್ ಕಮಿನ್ಸ್ 38 ರನ್ ಬಾರಿಸಿದರು.

ಇದನ್ನೂ ಓದಿ : Ashes 2023: ಉಸ್ಮಾನ್​ ಖವಾಜ ಶತಕ; ಆಂಗ್ಲರಿಗೆ ತಿರುಗೇಟು ನೀಡುತ್ತಿರುವ ಆಸೀಸ್​

ಅದಕ್ಕಿಂತ ಮೊದಲು ಖ್ವಾಜಾ ಅವರನ್ನು ಔಟ್ ಮಾಡಲು ಇಂಗ್ಲೆಂಡ್ ನಾಯಕ ನಾನಾ ತಂತ್ರಗಳನ್ನು ರೂಪಿಸಿದರು. 141 ರನ್ ಗಳಿಸಿದ್ದ ಖ್ವಾಜಾ ಕಮಿನ್ಸ್ ಅವರೊಂದಿಗೆ ಏಳನೇ ವಿಕೆಟ್ ಗೆ 34 ರನ್ ಸೇರಿಸಿದ್ದರು. ಅವರ ನಿರ್ಗಮನದ ನಂತರ, ಇಂಗ್ಲೆಂಡ್ ವೇಗಿಗಳು ಬೌನ್ಸರ್​ಗಳ ಮೂಲಕ ಪ್ರವಾಸಿ ತಂಡದ ಬಾಲಂಗೋಚಿಗಳು ಪೆವಿಲಿಯನ್​ ಹಾದಿ ಹಿಡಿಯವಂತೆ ನೋಡಿಕೊಂಡರು. ನೇಥನ್​ ಲಯಾನ್​, ಬೆನ್ ಡಕೆಟ್​​ಗೆ ಕ್ಯಾಚ್ ನೀಡಿದರು. ಸ್ಕಾಟ್ ಬೋಲ್ಯಾಂಡ್ ಒಲ್ಲಿ ಪೋಪ್​ಗೆ ಕ್ಯಾಚ್ ನೀಡಿದರು. ಇದರ ಪರಿಣಾಮವಾಗಿ, ಆಸ್ಟ್ರೇಲಿಯಾವು ಮೊದಲ ಇನಿಂಗ್ಸ್​ನಲ್ಲಿ 386 ರನ್​​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ (68ಕ್ಕೆ 3 ವಿಕೆಟ್​) ಹಾಗೂ ಒಲಿ ರಾಬಿನ್ಸನ್ (55ಕ್ಕೆ 3 ವಿಕೆಟ್​) ಉತ್ತಮ ಸಾಧನೆ ತೋರಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರರಾದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್ ಮೋಡ ಕವಿದ ವಾತಾವರಣದ ನಡುವೆ ಜಾಗರೂಕರಾಗಿ ಬ್ಯಾಟಿಂಗ್ ಮಾಡಿದರು. ಈ ಮೂಲಕ ಆತಿಥೇಯ ತಂಡ ವ್ಯತಿರಿಕ್ತ ರೀತಿಯಲ್ಲಿ ಎರಡನೇ ಇನಿಂಗ್ಸ್​ ಬ್ಯಾಟಿಂಗ್ ಆರಂಭಿಸಿತು. ಆದರೆ ಡಕೆಟ್ (19) ಔಟ್​ ಅದರೆ, ಸ್ಕಾಟ್ ಬೋಲ್ಯಾಂಡ್ ಎಸೆತಕ್ಅಕೆ ಜಾಕ್ ಕ್ರಾವ್ಲಿ ವಿಕೆಟ್​ ಒಪ್ಪಿಸಿದರು. ಒಲಿ ಪೋಪ್​ ಮತ್ತು ಜೋ ರೂಟ್​ ಖಾತೆ ತೆರೆಯದೇ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

Exit mobile version