ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ (Ashes 2023) ನಾಲ್ಕನೇ ಪಂದ್ಯ ನಾಲ್ಕನೇ ದಿನದ ಆಟಕ್ಕೆ ಮಳೆಯ ಅಡಚಣೆ ಉಂಟಾಯಿತು. ಮಳೆ ಬಿಡುವು ಕೊಟ್ಟ ಕೆಲವು ಸಮಯ ಪಂದ್ಯ ಮುಂದುವರಿದರೂ ಪೂರ್ಣ ಪ್ರಮಾಣದ ಆಟ ನಡೆಯಲಿಲ್ಲ. ಏತನ್ಮಧ್ಯೆ, ಆಸ್ಟ್ರೇಲಿಯಾ ತಂಡದ ವಿಕೆಟ್ಗಳನ್ನು ಉರುಳಿಸಿ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮಳೆಯು ನಿರಾಸೆ ಉಂಟು ಮಾಡಿತು. ಆಸ್ಟ್ರೇಲಿಯಾ ತಂಡವನ್ನು ಆಲ್ಔಟ್ ಮಾಡಬಹುದು ಎಂದು ನಿರೀಕ್ಷೆ ಮಾಡಿದ ಇಂಗ್ಲೆಂಡ್ ತಂಡಕ್ಕೆ ದಿನದಾಟದಲ್ಲಿ ಒಂದೇ ಒಂದು ವಿಕೆಟ್ ಮಾತ್ರ ಉರುಳಿಸಲು ಸಾಧ್ಯವಾಯಿತು. ಪ್ರವಾಸಿ ತಂಡ ಇನ್ನೂ 61 ರನ್ಗಳ ಹಿನ್ನಡೆಯಲ್ಲಿದ್ದು ಒಂದು ದಿನದ ಪಂದ್ಯ ಬಾಕಿ ಇರುವ ಕಾರಣ ಕೌತುಕ ಹೆಚ್ಚಿದೆ.
ಇಲ್ಲಿ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 317 ರನ್ಗಳಿಗೆ ಆಲ್ಔಟ್ ಆಗಿದ್ದ ಆಸ್ಟ್ರೇಲಿಯಾ ತಂಡ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 592 ರನ್ ಬಿಟ್ಟುಕೊಟ್ಟಿತ್ತು. 257 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 113 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. 162 ರನ್ಗಳ ಹಿನ್ನಡೆ ಹಾಗೂ ಇನ್ನೆರಡು ದಿನ ಪಂದ್ಯ ಬಾಕಿ ಇದ್ದ ಕಾರಣ ಇಂಗ್ಲೆಂಡ್ ಗೆಲುವು ಸುಲಭ ಎಂದು ಅಂದಾಜಿಸಲಾಗಿತ್ತು. ಆದರೆ, ಮಳೆಯ ಕಾರಣಕ್ಕೆ ನಾಲ್ಕನೇ ದಿನ ಕೇವಲ 30 ಓವರ್ಗಳ ಆಟ ಮಾತ್ರ ನಡೆಯಿತು. ಆಸ್ಟ್ರೇಲಿಯಾ ತಂಡ 5 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿದೆ. ಇದರಿಂದ ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭಯ ಕಡಿಮೆಯಾಗಿದೆ.
ಮರ್ನಸ್ ಶತಕ
ಮೂರನೇ ದಿನದ ಆಟ ಅಂತ್ಯಗೊಂಡಾ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮರ್ನಸ್ ಲಾಬುಶೇನ್ 44 ರನ್ ಬಾರಿಸಿ ಕ್ರೀಸ್ನಲ್ಲಿದ್ದರು. ಮಳೆಯು ಬಿಡುವು ನೀಡಿದಾಗ ನಡೆದ 30 ಓವರ್ಗಳ ಆಟದ ನಡುವೆ ಅವರು ತಮ್ಮ ಶತಕವನ್ನು ಪೂರೈಸಿದರು. 173 ಎಸೆತಗಳನ್ನು ಎದುರಿಸಿದ ಅವರು 10 ಫೋರ್ ಹಾಗೂ 2 ಸಿಕ್ಸರ್ಗಳ ನೆರವಿನಿಂದ 111 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಅವರು ಪೇರಿಸಿದ ಶತಕ ಆಸ್ಟ್ರೇಲಿಯಾ ತಂಡದ ವಿಕೆಟ್ ಉಳಿಸುವ ಜತೆಗೆ ರನ್ಗಳಿಕೆಗೂ ನೆರವಾಯಿತು.
ಲಾಬುಶೇನ್ಗೆ ಉತ್ತಮ ಸಾಥ್ ಕೊಟ್ಟ ಮಿಚೆಲ್ ಮಾರ್ಷ್ 107 ಎಸೆತಗಳಲ್ಲಿ 31 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.
ಇದನ್ನೂ ಓದಿ : Ashesh 2023 : ಮೊದಲ ಇನಿಂಗ್ಸ್ನಲ್ಲಿ 592 ರನ್ಗಳ ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್ಗೆ ಭರ್ಜರಿ ಮುನ್ನಡೆ
ಆ್ಯಶಸ್ ಸರಣಿ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ರೋಚಕ ವಿಜಯ ದಾಖಲಿಸುವ ಮೂಲಕ ಮುನ್ನಡೆ ಪಡೆದುಕೊಂಡಿದೆ. ಆದರೆ, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಧಿಕಾರಯುತ ವಿಜಯ ಸಾಧಿಸಿದೆ. ಹೀಗಾಗಿ ಆಸ್ಟ್ರೇಲಿಯಾತ ತಂಡ 2-1ರ ಮುನ್ನಡೆಯಲ್ಲಿದೆ. ಈ ಪಂದ್ಯ ಇಂಗ್ಲೆಂಡ್ ಪರವಾಗಿ ಇದ್ದ ಹೊರತಾಗಿಯೂ ಮಳೆ ಆಸ್ಟ್ರೇಲಿಯಾ ತಂಡಕ್ಕೆ ನೆರವು ನೀಡಿದಂತಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಆಸ್ಟ್ರೇಲಿಯಾ ತಂಡದ ಸರಣಿ ಗೆಲ್ಲುವ ಅವಕಾಶ ಹೆಚ್ಚಾಗಲಿದೆ.