ಕೊಲಂಬೊ: ಪಾಕಿಸ್ತಾನ ಮತ್ತು ಶ್ರೀಲಂಕಾ(Pakistan vs Sri Lanka) ನಡುವೆ ಏಷ್ಯಾಕಪ್(Asia Cup 2023) ಸೂಪರ್ 4 ಪಂದ್ಯ ಇಂದು ಕೊಲಂಬೊದಲ್ಲಿ ನಡೆಯಲಿದೆ. ಫೈನಲ್ ಪ್ರವೇಶ ಪಡೆಯಲು ಇತ್ತಂಡಗಳಿಗಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇರಿಸಬಹುದು. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಇದೆ. ಮಳೆ ಬಂದು ಪಂದ್ಯ ರದ್ದಾದರೆ ಪಾಕ್ನ ಫೈನಲ್ ಕನಸು ಭಗ್ನಗೊಳ್ಳಲಿದೆ. ಇದಕ್ಕೆ ಕಾರಣ ಭಾರತ ವಿರುದ್ಧದ ಪಂದ್ಯಕ್ಕೆ ಇರಿಸಿದ ಮೀಸಲು ದಿನ.
ಗೆದ್ದ ತಂಡಕ್ಕೆ ಫೈನಲ್‌ಗೆ
ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯದ ವೇಳೆ ಗೆಲುವು ಸಾಧಿಸುವ ತಂಡವು ಯಾವುದೇ ಅಡೆತಡೆ ಇಲ್ಲದೆ ಸುಲಭವಾಗಿ ಫೈನಲ್ ತಲುಪಲಿದೆ. ಇಲ್ಲಿ ಯಾವುದೇ ರನ್‌ರೇಟ್ ಲೆಕ್ಕಾಚಾರವು ಪರಿಗಣನೆಗೆ ಬರುವುದಿಲ್ಲ. ಇತ್ತಂಡಗಳು ತಲಾ ಎರಡು ಪಂದ್ಯ ಆಡಿದ್ದು, ತಲಾ ಒಂದರಲ್ಲಿ ಸೋಲು ಮತ್ತು ಗೆಲುವು ದಾಖಲಿಸಿ 2 ಅಂಕ ಗಳಿಸಿವೆ. ಹಾಗಾಗಿ ಗೆದ್ದ ತಂಡವು 4 ಅಂಕ ಪಡೆದು ಭಾರತ ವಿರುದ್ಧ ಫೈನಲ್ ಕದನಕ್ಕೆ ಸಿದ್ಧವಾಗಲಿದೆ.
ಪಂದ್ಯ ರದ್ದಾದರೆ?
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಕೊಲಂಬೊದಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಹಾಗೊಂದು ವೇಳೆ ಮಳೆಯಿಂದಾಗಿ ಈ ಪಂದ್ಯ ರದ್ದಾದರೆ, ರನ್ ರೇಟ್ ಲೆಕ್ಕಾಚಾರ ನಿರ್ಣಾಯಕ ಎನಿಸಲಿದೆ. ಹಾಗೆ ನೋಡಿದರೆ, ಈಗ ಪಾಕಿಸ್ತಾನಕ್ಕಿಂತ ಶ್ರೀಲಂಕಾ ಉತ್ತಮ ರನ್‌ರೇಟ್ ಕಾಯ್ದುಕೊಂಡಿದ್ದು, ಸಮಾನ ಅಂಕಗಳಿದ್ದರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಳೆಯಿಂದ ಪಂದ್ಯ ರದ್ದಾಗಿ, ತಲಾ ಒಂದೊಂದು ಅಂಕ ಹಂಚಿಕೊಂಡರೂ ರನ್‌ರೇಟ್ ಆಧಾರದ ಮೇಲೆ ಲಂಕಾ ಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ Naseem Shah: ಏಷ್ಯಾಕಪ್ನಿಂದ ಹೊರಬಿದ್ದ ನಸೀಮ್ ಶಾ
ಕಂಟಕವಾದ ಮೀಸಲು ದಿನ
ಭಾರತ ವಿರುದ್ಧ ಭಾನುವಾರ ನಡೆಯಬೇಕಿದ್ದ ಪಂದ್ಯಕ್ಕೆ ಮೀಸಲು ದಿನ ಜಾರಿಗೆ ತಂದಿದ್ದೇ ಇಂದು ಪಾಕ್ಗೆ ಕಂಟಕವಾಗಿದೆ. ಒಂದೊಮ್ಮೆ ಈ ಪಂದ್ಯಕ್ಕೆ ಮೀಸಲು ದಿನ ಇರದೇ ಹೋಗಿದ್ದರೆ ಪಾಕ್ಗೆ ಒಂದು ಅಂಕ ಲಭಿಸುತ್ತಿತ್ತು. ಆದರೆ ಮೀಸಲು ದಿನದ ಲಾಭ ಭಾರತಕ್ಕೆ ವರದಾನವಾಯಿತು. ಪಾಕ್ ವಿರುದ್ಧ ಗೆದ್ದು ಬಳಿಕ ಲಂಕಾವನ್ನು ಮಣಿಸಿ ಫೈನಲ್ ಪ್ರವೇಶ ಪಡೆಯಿತು. ಮೀಸಲು ದಿನ ಇರದೇ ಹೋಗಿದ್ದರೆ ಶುಕ್ರವಾರ ನಡೆಯು ಬಾಂಗ್ಲಾ ವಿರುದ್ಧದ ಪಂದ್ಯ ಭಾರತಕ್ಕೆ ಫೈನಲ್ ಪ್ರವೇಶಿಸಲು ಮಹತ್ವದ ಪಂದ್ಯವಾಗಿರುತ್ತಿತ್ತು. ಒಟ್ಟಾರೆ ಪಾಕ್ಗೆ ಮೀಸಲು ದಿನ ಸಂಕಷ್ಟ ತಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸೂಪರ್ 4 ಅಂಕಪಟ್ಟಿ
ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೇರಿದರೆ, ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಏಷ್ಯಾಕಪ್ ಆರಂಭವಾದ 1984ರಿಂದ ಇದುವರೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಮ್ಮೆಯೂ ಏಷ್ಯಾಕಪ್ ಫೈನಲ್‌ನಲ್ಲಿ ಎದುರಾಗಿಲ್ಲ. ಹಾಗಾಗಿ, ಈ ಬಾರಿ ಪಾಕಿಸ್ತಾನವೇ ಫೈನಲ್‌ಗೆ ಬಂದರೆ ಉಭಯ ದೇಶಗಳ ತಂಡಗಳ ನಡುವಿನ ಕದನವು ಜಿದ್ದಾಜಿದ್ದಿನಿಂದ ಕೂಡಿರಲಿದೆ.