Site icon Vistara News

Rajeev Shukla: ಆದಿತ್ಯ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ

Rajeev Shukla: Rajeev Shukla responds to Aditya Thackrey's 'Hosting World Cup final in Mumbai' remark

ಮುಂಬಯಿ: ಐಸಿಸಿ ವಿಶ್ವಕಪ್ ಟೂರ್ನಿಗಳು ಭಾರತದಲ್ಲಿ ನಡೆದಾಗ ಫೈನಲ್‌ ಪಂದ್ಯಗಳು ಮುಂಬೈನಿಂದ ಹೊರಹೋಗದಿರಲಿ ಎಂದು ಬಿಸಿಸಿಐ ವಿರುದ್ಧ ವ್ಯಂಗ್ಯವಾಡಿದ್ದ ಶಿವಸೇನಾ ಪಕ್ಷದ ನಾಯಕ ಆದಿತ್ಯ ಠಾಕ್ರೆ(Aditya Thackrey) ಹೇಳಿಕೆಗೆ ಇದೀಗ ಬಿಸಿಸಿಐ(BCCI) ಉಪಾಧ್ಯಕ್ಷ ರಾಜೀವ್‌ ಶುಕ್ಲಾ(Rajeev Shukla) ಅವರು ತಿರುಗೇಟು ನೀಡಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಅಹಮದಾಬಾದ್​ನಲ್ಲಿ ನಡೆಸಲಾಗಿತ್ತು. ಫೈನಲ್​ನಲ್ಲಿ ಭಾರತ ತಂಡ ಆಸೀಸ್​ ವಿರುದ್ಧ ಸೋಲು ಕಂಡು ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಭಾರತದ ಸೋಲಿಗೆ ಪಂದ್ಯ ಆಯೋಜಿಸಿದ ಸ್ಥಳದ ಕುರಿತು ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮುಂಬೈನಲ್ಲಿ ನಡೆಸಿದ್ದರೆ ಭಾರತ ಗೆಲುವು ಸಾಧಿಸುತ್ತಿತ್ತು ಎಂದು ಅನೇಕರು ಹೇಳಿದ್ದರು.

ಟಿ20 ವಿಶ್ವಕಪ್​ ಗೆದ್ದು ತವರಿಗೆ ಮರಳಿದ್ದ ಟೀಮ್​ ಇಂಡಿಯಾ ಆಟಗಾರರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಗುರುವಾರ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳನ್ನು ಕಂಡು ಎಲ್ಲರು ಬೆರಗಾಗಿದ್ದರು, ಮುಂಬೈ ಜನತೆಗೆ ಕ್ರಿಕೆಟ್​ ಕ್ರೇಜ್​ ಹೇಗಿದೆ ಎನ್ನುವುದು ಸಾಬೀತಾಗಿತ್ತು. ಇದೇ ಕಾರಣವನ್ನು ಇಟ್ಟುಕೊಂಡು ಆದಿತ್ಯ ಠಾಕ್ರೆ ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ Team India Fan: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರ ಹೆಸರನ್ನು ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ ಆದಿತ್ಯ ಠಾಕ್ರೆ, “ಗುರುವಾರ) ನಡೆದಿದ್ದ ವಿಶ್ವಕಪ್ ವಿಜಯಯಾತ್ರೆಯು ಮುಂಬೈ ಕ್ರಿಕೆಟ್‌ ಪ್ರೀತಿಯನ್ನು ಎತ್ತಿತೋರಿಸಿದೆ. ಇದು ಬಿಸಿಸಿಐಗೆ ಸ್ಪಷ್ಟ ಸಂದೇಶವೂ ಆಗಿದೆ. ಇನ್ನು ಮುಂದಾದರೂ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಫೈನಲ್‌ ಮುಂಬೈನಲ್ಲಿಯೇ ನಡೆಯಬೇಕು’ ಎಂದು ಬರೆದುಕೊಂಡಿದ್ದರು.

ಇದೀಗ ಆದಿತ್ಯ ಠಾಕ್ರೆ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ರಾಜೀವ್‌ ಶುಕ್ಲಾ, ಕ್ರಿಕೆಟ್ ಮಂಡಳಿಯ ನೀತಿಯ ಪ್ರಕಾರ, ಅಂತಿಮ ಪಂದ್ಯವನ್ನು ಯಾವಾಗಲೂ ನಿರ್ದಿಷ್ಟ ನಗರಕ್ಕೆ ನೀಡಲಾಗುವುದಿಲ್ಲ. “ಫೈನಲ್ ಎಲ್ಲಿ ನಡೆಯಬೇಕು ಎಂಬುದು ಬಿಸಿಸಿಐನ ನೀತಿಯಾಗಿದೆ. ಇದನ್ನು ಯಾವಾಗಲೂ ನಿರ್ದಿಷ್ಟ ನಗರಕ್ಕೆ ನೀಡಲಾಗುವುದಿಲ್ಲ. 1987ರ ಏಕದಿನ ವಿಶ್ವಕಪ್​ ಕೋಲ್ಕತ್ತಾದಲ್ಲಿ ನಡೆದಿತ್ತು. ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಕೂಡ ಐತಿಹಾಸಿಕ ಮೈದಾನವೇ ಆಗಿದೆ. ಅಲ್ಲಿಯೂ ಫೈನಲ್​ ಪಂದ್ಯ ಮಾಡಬಹುದು. ಇದು ಯಾವಾಗಲೂ ಒಂದು ನಿರ್ದಿಷ್ಟ ನಗರದಲ್ಲಿ ಆಗಬೇಕು ಎಂದು ನಿರ್ಧರಿಸಬೇಡಿ” ಎಂದು ಶುಕ್ಲಾ ತಿರುಗೇಟು ನೀಡಿದ್ದಾರೆ.

“ಈ ಹಿಂದೆ ಮುಂಬೈನಲ್ಲಿ ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆದಿವೆ. ಹೀಗಾಗಿ ಮತ್ತೆ ಅದೇ ಮೈದಾನದಲ್ಲಿ ಫೈನಲ್​ ನಡೆಸಿದರೆ ಒಂದೇ ಕ್ರಿಕೆಟ್​ ಸ್ಟೇಡಿಯಂಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಅಲ್ಲದೆ ವಾಂಖೆಡೆ ಸ್ಟೇಡಿಯಂ ಕಡಿಮೆ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಅಹಮದಾಬಾದ್ ಮೈದಾನವು 1,30,000 ಸಾಮರ್ಥ್ಯ ಹೊಂದಿದೆ. ಕೆಲವೊಮ್ಮೆ ನಾವು ಸ್ಟೇಡಿಯಂನ ಸಾಮರ್ಥ್ಯದ ಮೇಲೆಯೂ ತಾಣವನ್ನು ಆಯ್ಕೆ ಮಾಡುತ್ತೇವೆ” ಎಂದು ಶುಕ್ಲಾ ಹೇಳಿದ್ದಾರೆ.

Exit mobile version