ರಾಜ್‌ಕೋಟ್: ಭಾರತದ ಪ್ರಮುಖ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಸ್‌ಸಿಎ)ಯ ಕ್ರೀಡಾಂಗಣದ ಹೆಸರು ನಾಮಕರಣವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್(IND vs ENG) ಪಂದ್ಯಕ್ಕೂ ಮುನ್ನ ಈ ಕ್ರೀಡಾಂಗಣಕ್ಕೆ ಬಿಸಿಸಿಐನ ಮಾಜಿ ಕಾರ್ಯದರ್ಶಿ, ಹಿರಿಯ ಕ್ರಿಕೆಟ್ ಆಡಳಿತಗಾರ ನಿರಂಜನ್ ಶಾ ಹೆಸರನ್ನು ಇಡಲು ನಿರ್ಧಾರಿಸಲಾಗಿದೆ.
ಫೆ.15ರಂದು ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮರು ನಾಮಕರಣ ಮಾಡಲಿದ್ದಾರೆ. ಮರು ನಾಮಕರಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ಎಸ್‌ಸಿಎ ಕ್ರೀಡಾಂಗಣ ಎಂಬ ಹೆಸರಿದ್ದು ಮುಂದೆ ಈ ಹೆಸರು ಬದಲಾಗಲಿದೆ. 2013ರಲ್ಲಿ ಉದ್ಘಾಟನೆಗೊಂಡಿರುವ ಕ್ರೀಡಾಂಗಣದಲ್ಲಿ ಈ ವರೆಗೂ 2 ಟೆಸ್ಟ್, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.
ಸ್ಟೇಡಿಯಂಗಳ ಹೆಸರನ್ನು ಬದಲಾಯಿಸಿದ್ದು ಇದೇ ಮೊದಲೇನಲ್ಲ. 2019ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಇಡಲಾಗಿತ್ತು. ಅರುಣ್ ಜೇಟ್ಲಿ ಅವರಿಗೆ ಗೌರವ ಪೂರ್ವಕವಾಗಿ ಅವರ ಹೆಸರನ್ನು ಮರಣೋತ್ತರವಾಗಿ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ಅವರ ಹೆಸರನ್ನು ಇಟ್ಟಿತ್ತು. ಈಗ ಈ ಸ್ಟೇಡಿಯಂ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ಎಂದೇ ಕರೆಯಲಾಗುತ್ತದೆ. 1999ರಿಂದ 2003ರವರೆಗೆ ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದರು. ಇದೇ ವೇಳೆಯಲ್ಲಿ ಈ ಕ್ರೀಡಾಂಗಣದ ನವೀಕರಣ ಕೆಲಸ ನಡೆದಿತ್ತು. ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್ ಅನ್ನು ವಿಶ್ವದರ್ಜೆಗೆ ಏರಿಸಿದ್ದರು.
“ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹೊಸ ಹೆಸರನ್ನು ಅನಾವರಣಗೊಳಿಸಲಿದ್ದಾರೆ ಮತ್ತು ಸಮಾರಂಭಕ್ಕಾಗಿ ನಾವು ಬಿಸಿಸಿಐ ಹಿರಿಯ ಅಧಿಕಾರಿಗಳಿಗೆ ಆಹ್ವಾನಗಳನ್ನು ಕಳುಹಿಸಿದ್ದೇವೆ. ಆಹ್ವಾನಿಸಿದ ಎಲ್ಲಾ ಗಣ್ಯರು ಮತ್ತು ಪದಾಧಿಕಾರಿಗಳಿಂದ ನಾವು ದೃಢೀಕರಣವನ್ನು ಪಡೆಯುತ್ತೇವೆ” ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(Saurashtra Cricket Association) ಕಾರ್ಯದರ್ಶಿ ಹಿಮಾಂಶು ಶಾ ಹೇಳಿದ್ದಾರೆ.
ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್ಗೆ ಇಂದು ಭಾರತ ತಂಡ ಪ್ರಕಟ; ಕೊಹ್ಲಿ, ರಾಹುಲ್ ಆಗಮನ?
ನಿರಂಜನ್ ಶಾ ಕೊಡುಗೆ ಏನು?
ನಿರಂಜನ್ ಶಾ ಅವರು ಭಾರತ ತಂಡವನ್ನು ಪ್ರತಿನಿಧಿಸದಿದ್ದರೂ ದೇಶಿಯ ಕ್ರಿಕೆಟ್ನಲ್ಲಿ ಮತ್ತು ಬಿಸಿಸಿಐನಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 1965-66 ಮತ್ತು 1975-76ರ ನಡುವೆ ಅವರು ಸೌರಾಷ್ಟ್ರ ತಂಡಕ್ಕಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಸುಮಾರು ನಾಲ್ಕು ದಶಕಗಳ ಕಾಲ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಬಿಸಿಸಿಐ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಸೌರಾಷ್ಟ್ರ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಸ್ಟೇಡಿಯಂಗೆ ಇಡಲು ನಿರ್ಧರಿಸಲಾಗಿದೆ. ನಿರಂಜನ್ ಶಾ ಅವರಿಗೆ ಈಗ 79 ವರ್ಷ ವಯಸ್ಸು.