Site icon Vistara News

Ram Mandir: ರಾಮಮಂದಿರ ಲೋಕಾರ್ಪಣೆಗೆ ಕೈ ಮುಗಿದು ಶುಭ ಕೋರಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

keshav maharaj

ಜೊಹಾನ್ಸ್​ಬರ್ಗ್​: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ (ಜನವರಿ 22 ಸೋಮವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ದೇಶದ ಸಾವಿರಾರು ಗಣ್ಯರು, ಸಾಧು-ಸಂತರು, ಸಾಧಕರು, ಕರ ಸೇವಕರು, ಕ್ರೀಡಾಪಟುಗಳು ಮತ್ತು ಸಿನೆಮಾ ನಟ-ನಟಿಯರು ಅಯೋಧ್ಯೆ ತಲುಪಿದ್ದಾರೆ. ಇದೀಗ ಭಾರತ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್​ ಮಹರಾಜ್(Keshav Maharaj) ರಾಮಮಂದಿರ ಉದ್ಘಾಟನೆಗೆ ವಿಡಿಯೊ ಮೂಲಕ ಶುಭ ಹಾರೈಸಿದ್ದಾರೆ.

ಆಂಜನೇಯನ ಪರಮ ಭಕ್ತನಾಗಿರುವ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್​ ಸ್ಪಿನ್ನರ್​ ಕೇಶವ್​ ಮಹಾರಾಜ್ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಲೋಕಾರ್ಪಣೆಯ ಬಗ್ಗೆ ತಮ್ಮ ಊರಿನಿಂದಲೇ ಶುಭ ಹಾರೈಸಿದ್ದಾರೆ. “ಎಲ್ಲರಿಗೂ ನಮಸ್ತೆ. ನಾಳೆ(ಸೋಮವಾರ) ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯಕ್ಕೆ ಶುಭ ಹಾರೈಸುತ್ತೇನೆ. ಇದು ಎಲ್ಲರಿಗೂ ಶಾಂತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ತರಲಿ. ಜೈ ಶ್ರೀ ರಾಮ್” ಎಂದು ಮಹಾರಾಜ್ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ Ram Mandir: ರಾಜ್ಯದಲ್ಲೂ ನಾಳೆ ರಜೆ ಘೋಷಿಸಿ, ಅಪವಾದದಿಂದ ದೂರವಿರಿ: ಸಿಎಂಗೆ ವಿಜಯೇಂದ್ರ ಒತ್ತಾಯ

ಅಯೋಧ್ಯೆಗೆ ಭೇಟಿ ನೀಡುವೆ


ಕೆಲವು ದಿನಗಳ ಗಿಂದಷ್ಟೇ ಮಹರಾಜ್​ ಅವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವುದು ನನ್ನ ಈ ವರ್ಷದ ಪ್ರಮುಖ ಗುರಿ ಎಂದಿದ್ದರು. “ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ವೇಳೆ ನಾನು ಅಯೋಧ್ಯೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಆದರೆ ನಾನು ಖಂಡಿತಾ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇನೆ” ಎಂದು ಕೇಶವ ಮಹಾರಾಜ್ ಹೇಳಿದ್ದರು.


ಕೇಶವ ಮಹಾರಾಜ್‌ ಅವರು ಬ್ಯಾಟಿಂಗ್​ ನಡೆಸಲು ಮೈದಾನಕ್ಕೆ ಬಂದಾಗಲೆಲ್ಲ ‘ರಾಮ್ ಸಿಯಾ ರಾಮ್’ ಹಾಡನ್ನು ಸ್ಟೇಡಿಯಂನಲ್ಲಿ ಜೋರಾಗಿ ಹಾಕಲಾಗುತ್ತದೆ. ಈ ಹಾಡನ್ನು ಕೇಳಿದರೆ ತನಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಅವರು ಹೇಳಿದ್ದರು.

ಕೇಶವ್​ ಮಹಾರಾಜ್​ ಮೂಲತಃ ಭಾರತೀಯರಾಗಿದ್ದು, ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಅವರು ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತರಾಗಿ ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಮಹರಾಜ್​ ಕೇರಳದ ದೇವಸ್ಥಾನವೊಂದಕ್ಕೆ ಭಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ಫೋಟೊಗಳು ವೈರಲ್​ ಆಗಿತ್ತು. ಇದಲ್ಲದೆ ತಮ್ಮ ಬ್ಯಾಟ್ ಮೇಲೆ ಓಂ ಎಂದು ಬರೆದುಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 12.20 ಕ್ಕೆ ಪ್ರತಿಷ್ಠಾಪನಾ ಸಮಾರಂಭ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸಮಾರಂಭದ ಕೆಲವು ಆಚರಣೆಗಳು ಜನವರಿ 16 ರಂದು, ಪ್ರಾಣ-ಪ್ರತಿಷ್ಠಾಪನೆಗೆ ಒಂದು ವಾರ ಮೊದಲು ಪ್ರಾರಂಭವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಗಣ್ಯರು ಭಾಗವಹಿಸಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಡೀ ಅಯೋಧ್ಯೆ ನಗರದ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದೆ

Exit mobile version