Site icon Vistara News

Ram Mandir: ಅಯೋಧ್ಯೆಗೆ ತೆರಳಲು ವಿರಾಟ್​ ಕೊಹ್ಲಿ, ಅಶ್ವಿನ್​ಗೆ ಬೇಕು ಬಿಸಿಸಿಐ ಅನುಮತಿ!

r ashwin and virat kohli

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Rama Mandir) ಲೋಕಾರ್ಪಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ರಾಮಮಂದಿರ ಉದ್ಘಾಟನೆಯ ಆಹ್ವಾನ ಪಡೆದ ಟೀಮ್​ ಇಂಡಿಯಾ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ಆರ್​.ಅಶ್ವಿನ್​ ಈ ಸಮಾರಂಭಕ್ಕೆ ಹೋಗಬೇಕಾದರೆ ಬಿಸಿಸಿಐ ಒಪ್ಪಿಗೆ ಪಡೆಯಬೇಕಿದೆ ಎಂದು ತಿಳಿದುಬಂದಿದೆ.

ಹೌದು, ವಿರಾಟ್​ ಕೊಹ್ಲಿ ಮತ್ತು ಅಶ್ವಿನ್​ ಅವರು ಸದ್ಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನಾಡುವ ಭಾರತ ತಂಡದ ಭಾಗವಾಗಿದ್ದಾರೆ. ಉಭಯ ಆಟಗಾರರು ಕೂಡ ತಂಡದೊಂದಿಗೆ ಹೈದರಾಬಾದ್​ನಲ್ಲಿದ್ದು ಶನಿವಾರ ಅಭ್ಯಾಸ ಕೂಡ ನಡೆಸಿದ್ದಾರೆ. ಹೀಗಾಗಿ ಅವರು ತಂಡ ತೊರೆದು ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಹೋಗಬೇಕಾದರೆ ಬಿಸಿಸಿಐ ಒಪ್ಪಿಗೆ ಪಡೆಯಬೇಕಿದೆ.

ಇದನ್ನೂ ಓದಿ Ram Mandir: ಆಪ್​ ನಿರ್ಧಾರ ಧಿಕ್ಕರಿಸಿ ರಾಮಮಂದಿರಕ್ಕೆ ಹೊರಟ ಸಂಸದ ಹರ್ಭಜನ್​ ಸಿಂಗ್​

ಬಿಸಿಸಿಐ ನಿಯಮದ ಪ್ರಕಾರ ತಂಡದ ಜತೆಗಿದ್ದ ವೇಳೆ ಯಾವುದೇ ಕಾರಣಕ್ಕಾದರೂ ತಂಡವನ್ನು ತೊರೆಯಬೇಕಿದ್ದರೆ ಅನುಮತಿ ಕಡ್ಡಾಯವಾಗಿತ್ತದೆ. ಒಂದೊಮ್ಮೆ ಕೊಹ್ಲಿ ಮತ್ತು ಅಶ್ವಿನ್​ ಇಂಗ್ಲೆಂಡ್​ ಟೆಸ್ಟ್​ ಸರಣಿಯನ್ನಾಡುವ ಕ್ಯಾಂಪ್​ ಸೇರದೇ ಇದ್ದಿದ್ದರೆ ಇವರಿಗೆ ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಇಲ್ಲದೆ ಹೋಗಬಹುದಿತ್ತು. ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯ ಜನವರಿ 25ಕ್ಕೆ ಆರಂಭವಾಗಲಿದೆ. ಹೀಗಾಗಿ ತಂಡ ಅಭ್ಯಾಸ ಕೂಡ ಆರಂಭಿಸಿದೆ. ಇದೇ ಕಾರಣದಿಂದ ಉಭಯ ಆಟಗಾರರು ಅಯೋಧ್ಯೆಗೆ ತೆರಳಬೇಕಿದ್ದರೆ ಅನುಮತಿ ಪಡೆಯಬೇಕಿದೆ. ರಾಮಮಂದಿರದ ಉದ್ಘಾಟನೆಯ ಆಹ್ವಾನವನ್ನು ಕೇವಲ 5 ಕ್ರಿಕೆಟಿಗರಿಗೆ ಮಾತ್ರ ನೀಡಲಾಗಿದೆ. ವಿರಾಟ್​ ಕೊಹ್ಲಿ, ಸ್ಪಿನ್ನರ್​ ಆರ್​.ಅಶ್ವಿನ್​, ಮಾಜಿ ಆಟಗಾರರಾದ ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್​ ಮತ್ತು ಮಿಥಾಲಿ ರಾಜ್​.

ಹೈ ಅಲರ್ಟ್‌


ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.

ಅರ್ಧ ದಿನ ರಜೆ


ರಾಮಮಂದಿರ ಉದ್ಘಾಟನೆ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ದೇಶದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕಚೇರಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠೆಯನ್ನು ಭಾರತದಾದ್ಯಂತ 22ನೇ ಜನವರಿ 2024ರಂದು ಆಚರಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸಲು ನೌಕರರನ್ನು ಸಕ್ರಿಯಗೊಳಿಸಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನ 12.40 ಗಂಟೆಯವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

Exit mobile version