ಇಸ್ಲಾಮಾಬಾದ್ : ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಇತ್ತೀಚೆಗೆ ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ತಮಗೆ ಆಪ್ತರಾಗಿರುವ ನಜೀಮ್ ಸೇಥ್ಗೆ ಪಟ್ಟ ಕಟ್ಟಿದ್ದಾರೆ. ಏತನ್ಮಧ್ಯೆ, ಪಿಸಿಬಿಯ ಹುದ್ದೆ ಹೊಂದಿರುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡ ಹಾಗೂ ಬಿಸಿಸಿಐ ವಿರುದ್ಧ ಅನಗತ್ಯ ಹೊಟ್ಟೆಕಿಚ್ಚು ಪ್ರದರ್ಶಿಸುತ್ತಿದ್ದ ರಮೀಜ್, ಸ್ಥಾನ ಕಳೆದುಕೊಂಡ ಬಳಿಕವೂ ಹಳೆ ಚಾಳಿ ಬದಲಿಸಿಕೊಂಡಿಲ್ಲ. ಈಗಲೂ ಭಾರತ ತಂಡವನ್ನು (INDvsPAK) ಸೋಲಿಸುವ ಮತ್ತು ಬಿಸಿಸಿಐ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಗಳ ಜತೆ ಮಾತನಾಡಿದ ಅವರು ಭಾರತ ತಂಡವನ್ನು ಪದೇ ಪದೆ ಸೋಲಿಸಬೇಕು ಹಾಗೂ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸಬೇಕು ಎಂಬುದಾಗಿ ಬಾಬರ್ ಅಜಮ್ ಪಡೆಗೆ ಕರೆ ಕೊಟ್ಟಿದ್ದಾರೆ.
“ಭಾರತ ಕ್ರಿಕೆಟ್ ತಂಡಕ್ಕೆ ತಾನು ವಿಶ್ವದ ಸೂಪರ್ ಪವರ್ ಎಂಬ ಭ್ರಮೆ ಇದೆ. ಅದನ್ನು ಹೋಗಲಾಡಿಸಬೇಕಾದರೆ ಅವರನ್ನು ಆಗಾಗ ಸೋಲಿಸುತ್ತಿರಬೇಕು. ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ. ಇದರಿಂದ ಅವರ ಅಹಂಕಾರ ಕಡಿಮೆಯಾಗಿದೆ. ಮುಂದೆಯೂ ಅವಕಾಶ ಸಿಕ್ಕಾಗ ಸೋಲಿಸುತ್ತಿರಬೇಕು,” ಎಂಬದಾಗಿ ರಮೀಜ್ ಹೇಳಿದ್ದಾರೆ.
”ತಾನು ದೊಡ್ಡವನು ಎಂಬ ಭ್ರಮೆಯಿಂದಲೇ ಬಿಸಿಸಿಐ ತನಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದೆ. ಏಷ್ಯಾ ಕಪ್ ಅನ್ನು ಪಾಕಿಸ್ತಾನ ಬಿಟ್ಟು ಬೇರೆ ಕಡೆಯಲ್ಲಿ ನಡೆಸುವುದಾಇ ಹೇಳುತ್ತಿದೆ.ಈ ಮಾದರಿಯ ವರ್ತನೆಗಳನ್ನು ನಿಲ್ಲಿಸಬೇಕಾದರೆ ಭಾರತ ತಂಡವನ್ನು ನಿರಂತರವಾಗಿ ಸೋಲಿಸುತ್ತಿರಬೇಕು,” ಎಂದು ಹೇಳಿದರು.
ಇದೇ ವೇಳೆ ಅವರು ಭಾರತ ತಂಡ ಪಾಕಿಸ್ತಾನಕ್ಕೆ ಏಷ್ಯಾ ಕಪ್ಗಾಗಿ ಬರವುದರ ಮೇಲೆ ಪಾಕಿಸ್ತಾನ ಭಾರತದಲ್ಲಿ ನಡೆಯುವ ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ | Pakistan Cricket Team | ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಫ್ರಿದಿಗೂ ಒಂದು ಸ್ಥಾನ; ಯಾವ ಹುದ್ದೆ ಅವರಿಗೆ?