ಇಸ್ಲಾಮಾಬಾದ್: ಬಿಸಿಸಿಐ ಹಾಗೂ ಭಾರತ ಕ್ರಿಕೆಟ್ ತಂಡವನ್ನು ಅನಗತ್ಯವಾಗಿ ಟೀಕಿಸುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board) ಅಧ್ಯಕ್ಷ ರಮೀಜ್ ರಾಜಾ ಅವರು ತಮ್ಮ ಸ್ಥಾನವನ್ನೇ ಕಳೆದುಕೊಳ್ಳಲಿದ್ದಾರೆ. ಮಾಜಿ ಅಧ್ಯಕ್ಷ ನಜಮ್ ಸೇಥಿ ಅವರ ಹುದ್ದೆಯ ಮೇಲೆ ಕಣ್ಣೀಟ್ಟಿದ್ದು ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿ ಬಂದಿದ್ದು, ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರಮೀಜ್ ಅವರು 2021ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗಿನ ಪ್ರಧಾನಿ ಇಮ್ರಾನ್ ಖಾನ್ ಅವರು ರಮೀಜ್ಗೆ ಈ ಸ್ಥಾನ ಕಲ್ಪಿಸಿಕೊಟ್ಟಿದ್ದರು. ಇದೀಗ ಇಮ್ರಾನ್ ಪದಚ್ಯುತಗೊಂಡಿದ್ದು, ಶಹಬಾಜ್ ಷರಿಫ್ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಆ ದೇಶದ ಪ್ರಧಾನಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪೋಷಕ ಸದಸ್ಯರಾಗಿರುವ ಕಾರಣ ಅಧಿಕಾರ ಚಲಾಯಿಸಲು ಅವಕಾಶವಿದೆ. ಹೀಗಾಗಿ ಇಮ್ರಾನ್ ಆಪ್ತರಾಗಿರುವ ರಮೀಜ್ಗೆ ಕೊಕ್ ನೀಡುತ್ತಾರೆ ಎಂದು ಹೇಳಲಾಗಿದೆ.
ನಜೀಮ್ ಸೇಥಿ ಈ ಹಿಂದೆಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಅಲ್ಲಿನ ಖ್ಯಾತ ಪತ್ರಕರ್ತ ಹಾಗೂ ಕ್ರಿಕೆಟ್ ಮಂಡಳಿ ಜತೆ ನಂಟು ಹೊಂದಿರುವವರು. 2013 ರಿಂದ 14, 2017ರಿಂದ 18ರವರೆಗೆ ಪಿಸಿಬಿ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸಿದ್ದರು. ಐಪಿಎಲ್ ಮಾದರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಕ್ರಿಕೆಟ್ ಲೀಗ್ನ ಸ್ಥಾಪಕರೂ ಅವರೇ.
ರಮೀಜ್ ರಾಜಾ ಅವರು ಅಧ್ಯಕ್ಷರಾದ ಬಳಿಕ ಹಲವರಿಂದ ವಿರೋಧ ಕಟ್ಟಿಕೊಂಡಿದ್ದಾರೆ. ಅದರಲ್ಲೂ ಭಾರತ ಕ್ರಿಕೆಟ್ ತಂಡವನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ವಿಶ್ವ ಕಪ್ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದಿಲ್ಲೆ ಎಂದೆಲ್ಲ ಅವರು ಹೇಳಿಕೆಗಳನ್ನು ನೀಡಿದ್ದರು. ಇದೀಗ ಅವರು ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವುದಕ್ಕೆ ಪೇಚಾಡುತ್ತಿದ್ದಾರೆ.
ಇದನ್ನೂ ಓದಿ | Autobiography | ರಮೀಜ್ ರಾಜಾ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು, ಯಾಕೆಂದರೆ ಅವರಪ್ಪ ಪೊಲೀಸ್ ಕಮಿಷನರ್!