ಬೆಂಗಳೂರು: ಮುಂದಿನ ತಿಂಗಳು ಚೀನಾದ ಹ್ಯಾಂಗ್ಝೂನಲ್ಲಿ(Hangzhou, China) ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್(Asian Games) ತಂಡದಲ್ಲಿ ಫಿಟ್ನೆಸ್ ಇಲ್ಲದ ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿದೆ ಎಂದು ಹಿರಿಯ ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್(Rani Rampal), ಹಾಕಿ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ 34 ಸದಸ್ಯೆಯರನ್ನು ಒಳಗೊಂಡ ಮಹಿಳಾ ಹಾಕಿ ಸಂಭಾವ್ಯ ತಂಡದಿಂದ ಹೊರಗಿಟ್ಟ ಕಾರಣಕ್ಕೆ ರಾಷ್ಟ್ರೀಯ ಕೋಚ್ ವಿರುದ್ಧ ರಾಣಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪಿಟಿಐ(PTI) ಜತೆಗಿನ ಸಂದರ್ಶನದಲ್ಲಿ ರಾಣಿ ರಾಂಪಾಲ್ ಈ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. “ನಾನು ಏನೆಂಬುದನ್ನು ಯಾರಿಗೂ ಸಾಬೀತು ಪಡಿಸಬೇಕಿಲ್ಲ. ಈಗಾಗಕೇ ನನ್ನ ಹೆಸರಿನಲ್ಲಿ ರಾಷ್ಟ್ರೀಯ ತಂಡದ ಪರ ಹಲವು ದಾಖಲೆಗಳು ಇವೆ. ಕೆಲವರು ವೈಯಕ್ತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಿ ರಾಷ್ಟ್ರೀಯ ತಂದಿಂದ ದೂರ ಇರಿಸಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್ ತಂಡದಲ್ಲಿ ಫಿಟ್ನೆಸ್ ಇಲ್ಲದೆ ಹಲವು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ, ಆದರೆ ಅವರ ಹೆಷರನ್ನು ನಾನು ಹೇಳಲು ಇಚ್ಛೆ ಪಡುವುದಿಲ್ಲ” ಎಂದು ಹೇಳಿದರು.
ಕೋಚ್ಗೆ ಸವಾಲೆಸೆದಿದ್ದ ರಾಣಿ
ಕಳೆದ ವಾರವಷ್ಟ್ರೇ ರಾಣಿ ಅವರು “ತಾನು ಫಿಟ್ನೆಸ್ ಹೊಂದಿದ್ದೇನೆ, ಜತೆಗೆ ತಂಡದ ಪರ ಉತ್ತಮ ಪ್ರದರ್ಶನವನ್ನೂ ನೀಡಿದ್ದೇನೆ, ಹೀಗಿರುವಾಗ ತನ್ನನ್ನು ಏಕೆ ಈ ಶಿಬಿರದಿಂದ ದೂರ ಇಡಲಾಗಿದೆ ಎಂದು ತಿಳಿದುಕೊಳ್ಳಲು ಬಯಸಿದ್ದೇನೆ. ಇದಕ್ಕೆ ಸೂಕ್ತ ಉತ್ತವರನ್ನು ರಾಷ್ಟ್ರೀಯ ಮುಖ್ಯ ಕೋಚ್ ಜನ್ನೆಕ್ ಶಾಪ್ಮನ್ ನೀಡಬೇಕು” ಎಂದು ಸವಾಲಿನ ಪ್ರಶ್ನೆ ಮಾಡಿದ್ದರು. ಸದ್ಯ ಸಾಗುತ್ತಿರುವ ಹಾಕಿ ರಾಷ್ಟ್ರೀಯ ಶಿಬಿರ ಸೆಪ್ಟಂಬರ್ 18ರಂದು ಮುಕ್ತಾಯವಾಗಲಿದೆ.
ಇದನ್ನೂ ಓದಿ Asian Games 2023 : ವಿವಾದದ ಬಳಿಕ ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದ ವಿನೇಶ್ ಫೋಗಾಟ್
ಒಲಿಂಪಿಕ್ಸ್ ಬಳಿಕ ಆಡಿಲ್ಲ
ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರಾಣಿ ರಾಂಪಾಲ್ ತಂಡವನ್ನು ನಾಲ್ಕನೇ ಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಒಲಿಂಪಿಕ್ಸ್ ಬಳಿಕ ಗಾಯದ ಸಮಸ್ಯೆಯಿಂದ ರಾಣಿ ಇದುವರೆಗೆ ನಡೆದ ಯಾವುದೇ ಹಾಕಿ ಟೂರ್ನಿಯಲ್ಲೂ ಪಾಲ್ಗೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಅನುಭವಿ ಗೋಲ್ ಕೀಪರ್ ಸವಿತಾ ಪೂನಿಯ ಎಲ್ಲ ಟೂರ್ನಿಯಲ್ಲೂ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ವರ್ಷ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಇದ್ದು ಇದರಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರು ಆಡದಿದ್ದರೆ ಸವಿತಾ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಅಧಿಕವಾಗಿದೆ.
ಎ ಗುಂಪಿನಲ್ಲಿ ಭಾರತ
‘ಎ’ ಗುಂಪಿನಲ್ಲಿ ಕೊರಿಯಾ, ಮಲೇಷ್ಯಾ, ಹಾಂಕಾಂಗ್, ಚೀನಾ ಹಾಗೂ ಸಿಂಗಾಪುರ ತಂಡಗಳೊಂದಿಗೆ ಭಾರತ ಸ್ಥಾನ ಪಡೆದಿದಿದ್ದು, ಸೆಪ್ಟಂಬರ್ 27ರಂದು ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಮಹಿಳಾ ತಂಡ ಕಳೆದ ತಿಂಗಳು ಬಾರ್ಸಿಲೋನದಲ್ಲಿ 100ನೇ ವರ್ಷದ ಸ್ಪ್ಯಾನಿಶ್ ಹಾಕಿ ಟೂರ್ನಿಯನ್ನು ಜಯಿಸಿತ್ತು.