ಬೆಂಗಳೂರು: ರಣಜಿ ಟ್ರೋಫಿ(Ranji Trophy) ಕ್ರಿಕೆಟ್ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟವಾಗಿದೆ. ಉಭಯ ತಂಡಗಳ ಸೆಮಿ ಕಾದಾಟ ಫೆ. 8ರಿಂದ ಆರಂಭವಾಗಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವಿಕೆಟ್ ಕೀಪರ್ ಬಿಆರ್. ಶರತ್ ಬದಲಿಗೆ ನಿಹಾಲ್ ಉಲ್ಲಾಳ್ಗೆ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಭಾರಿ ಬದಲಾವಣೆಗಳೇನು ಸಂಭವಿಸಿಲ್ಲ.
ಮಾಯಾಂಕ್ ಅಗರ್ವಾಲ್(mayank agarwal) ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆರ್.ಸಮರ್ಥ್ ಉಪನಾಯಕರಾಗಿದ್ದಾರೆ. ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಈ ಹಿಂದಿನಂತೆ ತಂಡದಲ್ಲಿ ಮುಂದುವರಿದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್, ಎಂ.ವೆಂಕಟೇಶ್ ತಂಡದ ಮುಖ್ಯ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ Ranji Trophy: ರಣಜಿ; ಸೆಮಿಫೈನಲ್ನಲ್ಲಿ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು
ಮಯಾಂಕ್ ಪಡೆಗೆ ತವರಿನ ಲಾಭ
ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಸೆಮಿಫೈನಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ರಾಜ್ಯ ತಂಡ ಇದೇ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಿ ಮೇಲುಗೈ ಸಾದಿಸಿತ್ತು. ಆದ್ದರಿಂದ ಇದೀಗ ಸೆಮಿಫೈನಲ್ನಲ್ಲಿಯೂ ತವರಿನ ಲಾಭ ಮಯಾಂಕ್ ಪಡೆಗೆ ಲಭಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶ ಹಾಗೂ ಬಂಗಾಳ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.