ವಡೋದರ: ಇನ್ನೇನು ರಣಜಿ ಟೂರ್ನಿಯ(Ranji Trophy 2024) ಪಂದ್ಯ ಆಡಬೇಕು ಎನ್ನುವಷ್ಟರಲ್ಲಿ ಒಡಿಶಾದ ಆಲ್‌ರೌಂಡರ್ ಸುಮಿತ್ ಶರ್ಮ(Sumit Sharma) ಅವರಿಗೆ ಬಿಸಿಸಿಐ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಶುಕ್ರವಾರ ಆರಂಭಗೊಂಡ ರಣಜಿ ಟೂರ್ನಿಯಲ್ಲಿ ಬರೋಡಾ ತಂಡದ ಎದುರು ಆಡಲು ಸಿದ್ಧರಾಗಿದ್ದ ವೇಳೆ ಸುಮಿತ್‌ಗೆ ಈ ಆಘಾತ ಎದುರಾಗಿದೆ.
ಸುಮಿತ್ ಶರ್ಮ ಜೂನಿಯರ್ ಕ್ರಿಕೆಟ್ ಆಡುವ ವೇಳೆ ನೀಡಿದ ಜನನ ಪ್ರಮಾಣಪತ್ರಕ್ಕೂ ಈಗಿನ ಜನನ ಪ್ರಮಾಣಪತ್ರಕ್ಕೂ ತಾಳೆಯಾಗದ ಕಾರಣ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ ಎಂಬುದಾಗಿ ಒಡಿಶಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಸಂಜಯ್ ಬೆಹೆರಾ ತಿಳಿಸಿದ್ದಾರೆ. ಜನನ ಪ್ರಮಾಣಪತ್ರ ಗೊಂದಲದಿಂದಾಗಿ ಮುಂದಿನ 2 ವರ್ಷಗಳ ಕಾಲ ಸುಮಿತ್ ಶರ್ಮ ದೇಶೀಯ ಯಾವುದೇ ಕ್ರಿಕೆಟ್ ಟೂರ್ನಿಯಲ್ಲೂ ಪಾಲ್ಗೊಳ್ಳುವಂತಿಲ್ಲ.
ಬಿಸಿಸಿಐ ಪ್ರೋಟೋಕಾಲ್‌ಗಳ ಪ್ರಕಾರ, ಮಂಡಳಿಯು ಈಗಾಗಲೇ ಅವರೊಂದಿಗೆ ನೋಂದಾಯಿಸಲ್ಪಟ್ಟಿರುವ ಮತ್ತು ಜನ್ಮ ದಿನಾಂಕವನ್ನು ಸರಿಯಾಗಿ ನೀಡಿದಲ್ಲಿ ಅವರು ಯಾವುದೇ ನಿಷೇಧವನ್ನು ಎದುರಿಸುವುದಿಲ್ಲ ಮತ್ತು ವಯೋಮಾನದ ಕ್ರಿಕೆಟ್ ಆಡಲು ಅವಕಾಶ ನೀಡಲಾಗುತ್ತದೆ. ಇದನ್ನು ವಾಲಂಟರಿ ಡಿಸ್ಕ್ಲೋಸರ್ ಸ್ಕೀಮ್ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಕ್ರಿಕೆಟಿಗನು ವಂಚನೆಯನ್ನು ಮಾಡಿದ್ದರೆ ಮತ್ತು ಮರೆಮಾಚುವುದನ್ನು ಮುಂದುವರಿಸಿ ಸಿಕ್ಕಿಬಿದ್ದಾಗ ಅವರನ್ನು ನಿಷೇಧಿಸಲಾಗುವುದು.
ಇದನ್ನೂ ಓದಿ Test ranking: ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಂಡ ಟೀಮ್ ಇಂಡಿಯಾ
ವಂಶಜ್ ಶರ್ಮಗೂ ನಿಷೇಧ ಶಿಕ್ಷೆ ವಿಧಿಸಿದ್ದ ಬಿಸಿಸಿಐ
ಕಳೆದ ವರ್ಷಾಂತ್ಯದಲ್ಲಿ ಹಲವು ಜನ್ಮ ದಿನಾಂಕದ ಪ್ರಮಾಣ ಪತ್ರಗಳನ್ನು ಇಟ್ಟುಕೊಂಡ ಆರೋಪದ ಮೇಲೆ ದೇಶೀಯ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡುವ ಕ್ರಿಕೆಟಿಗ ವಂಶಜ್ ಶರ್ಮ(Vanshaj Sharma) ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎರಡು ವರ್ಷಗಳ ಕಾಲ ನಿಷೇಧ ಮಾಡಿತ್ತು. ನಿಷೇಧ ಶಿಕ್ಷೆಯಿಂದಾಗಿ ವಂಶಜ್ ಇನ್ನು 2 ವರ್ಷಗಳ ಕಾಲ ಬಿಸಿಸಿಐ ಬ್ಯಾನರ್ ಅಡಿಯಲ್ಲಿ ನಡೆಯುವ ಯಾವುದೇ ಪಂದ್ಯವನ್ನು ಆಡುವಂತಿಲ್ಲ ಎಂದು ಹೇಳಿತ್ತು.
2021-22ರಲ್ಲಿ ವಂಶಜ್ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯಿಂದ ಮೊದಲು ನೋಂದಾಣಿ ಮಾಡಿದ್ದರು. ಆದರೆ, ಅವರ ಡೇಟಾ ಬಿಸಿಸಿಐಯಲ್ಲಿ ಲಭ್ಯವಿತ್ತು ಮತ್ತು ಅಸೋಸಿಯೇಷನ್ ಇದನ್ನು ಚಾರ್ಜ್ ಮಾಡುವಾಗ ಅವರು ಬಹು ಜನನ ಪ್ರಮಾಣಪತ್ರಗಳನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು. ಇದರ ಪರಿಣಾಮವಾಗಿ ಅವರಿಗೆ ಬಿಸಿಸಿಐ ಎರಡು ವರ್ಷಗಳ ಕಾಲ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸದಂತೆ ಶಿಕ್ಷೆ ವಿಧಿಸಿತ್ತು.
ವಂಶಜ್ ಶರ್ಮಾ ಅವರು ಆಟಗಾರರ ಐಡಿ 17026ಯ ಪ್ರಕಾರ ಬಿಸಿಸಿಐಗೆ ಬಹು ಜನನ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು. ಆದರೆ ಅವರ ಬಳಿ ಇನ್ನೂ ಕೂಡ ಜನ್ಮ ದಿನಾಂಕದ ಪ್ರಮಾಣ ಪತ್ರಗಳು ಕಂಡು ಬಂದ ಕಾರಣ ಅವರನ್ನು ಅಕ್ಟೋಬರ್ 27 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಎಲ್ಲ ಬಿಸಿಸಿಐ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು. ನಿಷೇಧ ಮುಗಿಯುವ ತನಕ ಅವರು ಬಿಸಿಸಿಐ ಬ್ಯಾನರ್ ಅಡಿಯಲ್ಲಿ ನಡೆಯುವ ಎಲ್ಲ ಪಂದ್ಯಾವಳಿಗಳಿಂದ ಹೊರಗುಳಿಯಲಿದ್ದಾರೆ ಎಂದು ಜೆಕೆಸಿಎಯ ನಿರ್ವಾಹಕ ಅನಿಲ್ ಗುಪ್ತಾ ತಿಳಿಸಿದ್ದರು.