ಬೆಂಗಳೂರು: ಇಲ್ಲಿ ನಡೆಯತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ(Ranji Trophy) ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಯಾಂಕ್ ಅಗರ್ವಾಲ್(mayank agarwal) ಅವರ ದ್ವಿಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿದೆ.
ನಂಬುಗೆಯ ಬ್ಯಾಟರ್‌ಗಳೆಲ್ಲ ಸಾಲು ಸಾಲಾಗಿ ಕೈಕೊಟ್ಟಾಗ ಕಪ್ತಾನನ ಆಟದ ಮೂಲಕ ಮೊದಲ ದಿನ ಶತಕ ಬಾರಿಸಿ ತಂಡವನ್ನು ಕಾಪಾಡಲು ಟೊಂಕ ಕಟ್ಟಿದ್ದ ಅಗರ್ವಾಲ್ ದ್ವಿತೀಯ ದಿನದಾಟದಲ್ಲಿ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರ ಬ್ಯಾಟಿಂಗ್ ಸಾಹಸದಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್ನಲ್ಲಿ 407 ರನ್ ಗಳಿಸಿ ಸವಾಲೊಟ್ಡಿದೆ. ಮೊದಲ ದಿನ ಕರ್ನಾಟಕ 5 ವಿಕೆಟಿಗೆ 229 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿತ್ತು.
ಮೊದಲ ದಿನದಾಟದಲ್ಲಿ 58 ರನ್ ಗಳಿಸಿದ್ದ ಶರತ್ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ ಕೇವಲ 8 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಕೃಷ್ಣಪ್ಪ ಗೌತಮ್(2) ಹಾಗೂ ವಿ. ವೈಶಾಕ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೂ ತಂಡಕ್ಕೆ ಆಸರೆಯಾದ ನಾಯಕ ಅಗರ್ವಾಲ್, ಸೌರಾಷ್ಟ್ರ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 367 ಎಸೆತಗಳನ್ನು ಎದುರಿಸಿ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮಯಾಂಕ್ 429 ಎಸೆತಗಳನ್ನು ಎದುರಿಸಿ 28 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 249 ರನ್ ಬಾರಿಸಿ ಕೊನೆಯವರಾಗಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ Ranji Trophy Semifinal: ಸೌರಾಷ್ಟ್ರ ವಿರುದ್ಧ ಅಜೇಯ ಶತಕ ಬಾರಿಸಿ ಮಿಂಚಿದ ಮಯಾಂಕ್ ಅಗರ್ವಾಲ್
ಸದ್ಯ ಗುರಿ ಬೆನ್ನಟ್ಟುತ್ತಿರುವ ಸೌರಾಷ್ಟ್ರ ತಂಡ 9 ರನ್ಗೆ ಒಂದು ವಿಕೆಟ್ ಕಳೆದುಕೊಂಡು ಆಟ ಮುಂದುವರಿಸುತ್ತಿದೆ.