ಮುಂಬಯಿ: ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ(204) ಅವರು ಪ್ರಸಕ್ತ ಸಾಲಿನ ರಣಜಿ ಟ್ರೋಫಿ(Ranji Trophy) ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ಆರಂಭವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡಕ್ಕೆ ಮೊದಲನೇ ದಿನ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (162 ರನ್) ಹಾಗೂ ಸೂರ್ಯಕುಮಾರ್ ಯಾದವ್ (90) ಮುನ್ನಡೆ ತಂದುಕೊಟ್ಟಿದ್ದರು. ಇವರಿಬ್ಬರ ಜತೆಗೆ ನಾಯಕ ಅಜಿಂಕ್ಯ ರಹಾನೆ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಮೊದಲನೇ ದಿನ ಶತಕ ಸಿಡಿಸಿದ್ದ ಅಜಿಂಕ್ಯ ರಹಾನೆ, ಎರಡನೇ ದಿನವಾದ ಬುಧವಾರ ಕೂಡ ಅದೇ ಬ್ಯಾಟಿಂಗ್ ಲಯವನ್ನು ಮುಂದುವರಿಸಿ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿಕೊಂಡರು.
ರಹಾನೆ ಒಟ್ಟು 261 ಎಸೆತ ಎದುರಿಸಿ 204 ರನ್ ಗಳಿಸಿದರು. ಈ ಮನಮೋಹಕ ಇನಿಂಗ್ಸ್ನಲ್ಲಿ 3 ಸಿಕ್ಸರ್ ಹಾಗೂ 26 ಬೌಂಡರಿಗಳು ಒಳಗೊಂಡಿತು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಒಂದೊಮ್ಮೆ ಇದೇ ಪ್ರದರ್ಶನವನ್ನು ಮುಂದಿನ ಪಂದ್ಯದಲ್ಲಿಯೂ ತೋರ್ಪಡಿಸಿದರೆ, ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅವಕಾಶ ಸಿಗುವ ಸಾಧ್ಯತೆ ಇದೆ.
ಮೊದಲನೇ ದಿನ 121 ಎಸೆತಗಳಲ್ಲಿ ಶತಕ ಬಾರಿಸಿದ್ದ ಅಜಿಂಕ್ಯ ರಹಾನೆ ಅವರು, ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮುರಿಯದ ಮೂರನೇ ವಿಕೆಟ್‌ಗೆ 206 ರನ್ ಜತೆಯಾಟವನ್ನು ಆಡಿದ್ದರು. ಆ ಮೂಲಕ ಮೊದಲನೇ ದಿನದಾಂತ್ಯಕ್ಕೆ ಅಜಿಂಕ್ಯ ರಹಾನೆ ಅವರು 139 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ನಿರೀಕ್ಷೆಯಂತೆ ಎರಡನೇ ದಿನವೂ ಅವರು ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದರು. ದ್ವಿಶತಕ ಸಿಡಿಸುವ ಜತೆಗೆ ಸರ್ಫರಾಜ್ ಖಾನ್ ಅವರೊಂದಿಗೆ 196 ರನ್ ಜತೆಯಾಟವನ್ನು ಆಡುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟಾರೆ ತಂಡ 6 ವಿಕೆಟ್ ನಷ್ಟಕ್ಕೆ 651 ರನ್ ಗಳಿಸಿ ಡಿಕ್ಕೇರ್ ಮಾಡಿದೆ.
ಇದನ್ನೂ ಓದಿ | IND VS BAN | ಬರೋಬ್ಬರಿ ಮೂರು ವರ್ಷಗಳ ಬಳಿಕ ಅಮೋಘ ಶತಕ ಬಾರಿಸಿದ ಚೇತೇಶ್ವರ್ ಪೂಜಾರ