Site icon Vistara News

Ranji Trophy: ಕರ್ನಾಟಕ ತಂಡ ತೊರೆದು ಬೇರೆ ರಾಜ್ಯದ ತಂಡದತ್ತ ತೆರಳಿದ ನಾಲ್ಕು ಸ್ಟಾರ್​ ಆಟಗಾರರು

KV Siddharth, Shreyas Gopal, Rohan Kadam and Karun Nair

ಬೆಂಗಳೂರು: ಈ ಬಾರಿಯ ರಣಜಿ(Ranji Trophy) ಆವೃತ್ತಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಲ್ಕು ಆಟಗಾರರು ಬೇರೆ ರಾಜ್ಯ ತಂಡದಲ್ಲಿ ಆಡಲು ನಿರ್ಧರಿಸಿದ್ದಾರೆ. ಆಲ್ ರೌಂಡರ್ ಶ್ರೇಯಸ್ ಗೋಪಾಲ್(Shreyas Gopal), ಕೆ.ವಿ ಸಿದ್ಧಾರ್ಥ್(KV Siddharth), ರೋಹನ್ ಕದಂ(Rohan Kadam) ಮತ್ತು ಮಾಜಿ ನಾಯಕ ಕರುಣ್ ನಾಯರ್(Karun Nair) ರಾಜ್ಯ ತಂಡ ತೊರೆದು ಬೇರೆ ತಂಡದ ಪರ ಆಡಲಿರುವ ಆಟಗಾರು.

ಶ್ರೇಯಸ್ ಗೋಪಾಲ್ ಅವರು ಕೇರಳ ತಂಡಕ್ಕೆ ಹೋದರೆ, ಕೆವಿ ಸಿದ್ಧಾರ್ಥ ಮತ್ತು ರೋಹನ್ ಕದಂ ಅವರು ಗೋವಾ ತಂಡದತ್ತ ಮುಖಮಾಡಿದ್ದಾರೆ. ಸದ್ಯ ಇಂಗ್ಲೆಂಡ್​ನಲ್ಲಿ ಮೈನರ್ ಕೌಂಟಿ ಆಡುತ್ತಿರುವ ಕರುಣ್ ನಾಯರ್ ವಿದರ್ಭ ತಂಡದ ಪರ ಆಡಲಿದ್ದಾರೆ. ಈ ಹಿಂದೆಯೂ ಅನೇಕ ಆಟಗಾರರು ರಾಜ್ಯ ತಂಡ ತೊರೆದು ಬೇರೆ ತಂಡದಲ್ಲಿ ಆಡಿದ ನಿದರ್ಶನ ಹಲವಾರು ಇದೆ. ರಾಬಿನ್​ ಉತ್ತಪ್ಪ ಅವರು ಕೇರಳ ಪರ ಆಡಿದ್ದರು.

ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಮತ್ತು ಅನೇಕ ಸ್ಟಾರ್​ ಆಟಗಾರು ತಂಡದಲ್ಲಿ ಮಿಂಚುತ್ತಿರುವ ಕಾರಣದಿಂದ ಕಳೆದ ಋತುವಿನಲ್ಲಿ ಸಿದ್ಧಾರ್ಥ್, ಕರುಣ್​ ನಾಯರ್​ಗೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ತಂಡ ತೊರೆದು ಬೇರೆ ತಂಡದ ಪರ ತಮ್ಮ ಕ್ರಿಕೆಟ್​ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ.

ಎಡಗೈ ಆಟಗಾರ ರೋಹನ್ ಕದಂ ಅವರು 2021ರ ನವೆಂಬರ್​ನಲ್ಲಿ ಕೊನೆಯ ಬಾರಿ ಕರ್ನಾಟಕ ಪರ ಆಡಿದ್ದರು. ಇದಾದ ಬಳಿಕ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮಾರ್ಚ್ 2017 ರಲ್ಲಿ ಪದಾರ್ಪಣೆ ಮಾಡಿದ ಕದಂ ಇದುವರೆಗೆ ರಾಜ್ಯ ತಂಡಕ್ಕಾಗಿ 4 ಪ್ರಥಮ ದರ್ಜೆ, 13 ಲಿಸ್ಟ್ ಎ ಮತ್ತು 29 ಟಿ 20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ Ranji Trophy : ಮುಂದಿನ ಋತುವಿನ ರಣಜಿ ಟ್ರೋಫಿಯ ದಿನಾಂಕ ಬಹಿರಂಗ

ಕಳೆದ ಆವೃತ್ತಿಯ ರಣಜಿಯಲ್ಲಿ ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಮುಂಬೈ ತಂಡವನ್ನು ತೊರೆದು ಗೋವಾ ಪರ ಆಡಿದ್ದರು. ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ತಂದೆಯ ದಾಖಲೆಯನ್ನು ಸರಿಗಟ್ಟಿದ್ದರು. ಹೀಗೆ ಅನೇಕ ಆಟಗಾರರು ಅವಕಾಶಕ್ಕಾಗಿ ತಮ್ಮ ಮೂಲ ತಂಡ ತೊರೆದು ಬೇರೆ ತಂಡಗಳಿಗೆ ವಲಸೆ ಹೋಗುತ್ತಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ (Ranji Trophy) 2024ರ ಜನವರಿ 5ರಿಂದ ಆರಂಭವಾಗಲಿದೆ. ಲೀಗ್ ಹಂತವು ಫೆಬ್ರವರಿ 19ರಂದು ಕೊನೆಗೊಳ್ಳಲಿದೆ. ನಾಕೌಟ್ ಸುತ್ತುಗಳು ಫೆಬ್ರವರಿ 23 ರಂದು ಪ್ರಾರಂಭವಾಗಲಿದ್ದು, ಪಂದ್ಯಾವಳಿಯು ಮಾರ್ಚ್ 14 ರಂದು ಕೊನೆಗೊಳ್ಳಲಿದೆ.

ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿದ್ದು, ಅಗ್ರ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಇರಲಿವೆ ಮತ್ತು ಕೆಳಗಿನ ವಿಭಾಗವು ಆರು ತಂಡಗಳ ಒಂದು ಗುಂಪನ್ನು ಒಳಗೊಂಡಿರುತ್ತದೆ. ಎಲೈಟ್ ವಿಭಾಗದ ಒಂದು ತಂಡವು ಚಾಂಪಿಯನ್​ ಆಗಲು 10 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಏಳು ಲೀಗ್ ಪಂದ್ಯಗಳು ಸೇರಿವೆ, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್.

ತಂಡಗಳ ಗುಂಪು

ಎಲೈಟ್ ಗ್ರೂಪ್ ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವಿಸಸ್ ಮತ್ತು ಮಣಿಪುರ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಬಿ: ಈ ಗುಂಪಿನಲ್ಲಿ ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್ ಗಢ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಬಿಹಾರ ತಂಡಗಳಿವೆ.

ಎಲೈಟ್ ಗ್ರೂಪ್ ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರಾ ಮತ್ತು ಚಂಡೀಗಢ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಡಿ: ಮಧ್ಯಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬರೋಡಾ, ದೆಹಲಿ, ಒಡಿಶಾ, ಪಾಂಡಿಚೆರಿ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳು ಈ ಗುಂಪಿನಲ್ಲಿವೆ.

ಪ್ಲೇಟ್ ಗ್ರೂಪ್: ಎಲೈಟ್ 31, 32ನೇ ಸ್ಥಾನ; ಪ್ಲೇಟ್ ರ್ಯಾಂಕ್ 3, 4, 5, 6. ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ತಂಡಗಳು ಈ ಗುಂಪಿನಲ್ಲಿವೆ.

Exit mobile version