ನವದೆಹಲಿ: ಸೌರಾಷ್ಟ್ರ ತಂಡದ ಎಡಗೈ ವೇಗಿ ಜೈದೇವ್ ಉನಾದ್ಕತ್ ವರ್ಷದ ಮೊದಲ ರಣಜಿ(Ranji Trophy) ಪಂದ್ಯದಲ್ಲಿ ಮೊದಲ ಓವರ್ನಲ್ಲಿಯೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶೇಷ ಸಾಧನೆ ಮಾಡಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಮೂಲಕ ಉನಾದ್ಕತ್, 12 ವರ್ಷಗಳ ನಂತರ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಮರಳಿದ್ದರು. ಇದೀಗ ವರ್ಷಾರಂಭದಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಮತ್ತೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಇದು 88 ವರ್ಷಗಳ ಮೊದಲ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿನ ಅಪೂರ್ವ ದಾಖಲೆಯಾಗಿದೆ.
ಮಂಗಳವಾರ ದೆಹಲಿ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ನಾಯಕ ಉನಾದ್ಕತ್ ಮೊದಲ ಓವರ್ನ 3, 4 ಮತ್ತು 5ನೇ ಎಸೆತದಲ್ಲಿ ಧ್ರುವ ಶೌರಿ, ವೈಭವ್ ರಾವಲ್ ಮತ್ತು ಯಶ್ ದುಲ್ ಅವರ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಬಳಿಕದ ಓವರ್ನಲ್ಲಿ ಮತ್ತೆರಡು ವಿಕೆಟ್ ಉಡಾಯಿಸಿ ಒಟ್ಟು ಐದು ವಿಕೆಟ್ ಕಿತ್ತ ಸಾಧನೆ ಮಾಡಿದರು. ಇದು ಉನಾದ್ಕತ್ಗೆ 21ನೇ ಬಾರಿ ದೇಶೀಯ ಕ್ರಿಕೆಟ್ನಲ್ಲಿ ಒಲಿದ 5 ವಿಕೆಟ್ ಸಾಧನೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಡೆಲ್ಲಿಗೆ ಆರಂಭದಲ್ಲೇ ಉನಾದ್ಕತ್ ಮಾರಕ ಬೌಲಿಂಗ್ ಮೂಲಕ ಆಘಾತ ನೀಡಿದರು. ಸದ್ಯ 8 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿರುವ ಡೆಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದೆ.
ಇದನ್ನೂ ಓದಿ | ವಿಸ್ತಾರ Explainer | ದೇಶಿ ಕ್ರಿಕೆಟ್ನ ರಾಜ ರಣಜಿ ಟ್ರೋಫಿಯ ಆರಂಭ ಎಲ್ಲಿಂದ? ಕರ್ನಾಟಕದ ಸಾಧನೆಯೇನು? ಇಲ್ಲಿದೆ ಮಾಹಿತಿ