ಬೆಂಗಳೂರು: ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ದೇಶಿ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ನಾಯಕತ್ವ ಕಳೆದುಕೊಂಡಿದ್ದ ಮನೀಷ್ ಪಾಂಡೆ ಇದೀಗ ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಮನೀಷ್ ಪಾಂಡೆ ಕಳೆದ ಸಯ್ಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಸೇರಿದಂತೆ ಕೆಲ ಪ್ರಮುಖ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಾಣುವ ಮೂಲಕ ನಾಯಕ್ವದಿಂದ ಕೆಳಗಿಳಿದಿದ್ದರು. ಈ ಸ್ಥಾನವನ್ನು ಮಯಾಂಕ್ ಅಗರ್ವಾಲ್ಗೆ ನೀಡಲಾಗಿತ್ತು. ಇದೀಗ ಭರ್ಜರಿ ದ್ವಿಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಒಟ್ಟು 186 ಎಸೆತಗಳನ್ನು ಎದುರಿಸಿದ ಪಾಂಡೆ 14 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ ಅಜೇಯ 208 ರನ್ ಬಾರಿಸಿದರು.
ಮನೀಷ್ ಪಾಂಡೆ ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 603 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಇದಕ್ಕೂ ಮುನ್ನ ತಂಡ ಆರಂಭಿಕ ಆಟಗಾರ ಆರ್. ಸಮರ್ಥ್ 140 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗೋವಾ ತಂಡ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದೆ.
ಕೆಲವು ದಿನಗಳ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮನೀಷ್ ಪಾಂಡೆ ಅವರನ್ನು 2.4 ಕೋಟಿಗೆ ಖರೀದಿಸಿತು. ಕಳೆದ ಸೀಸನ್ನಲ್ಲಿ ಪಾಂಡೆ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ತಂಡ 4.6 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇಡೀ ಸೀಸನ್ನಲ್ಲಿ ಪಾಂಡೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರಿಂದ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ದೇಶೀಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಈ ಬಾರಿ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | IND VS SL | ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭ; ಲಂಕಾ ಸರಣಿಯಿಂದ ಹಿರಿಯ ಆಟಗಾರರಿಗೆ ಕೊಕ್!