ಗುವಾಹಟಿ: ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ಪೃಥ್ವಿ ಶಾ ತ್ರಿಶತಕ ಬಾರಿಸಿ ಮಿಂಚಿದ್ದಾರೆ. ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಅವರು ಭರ್ಜರಿ ಬ್ಯಾಟಿಂಗ್ ಮೂಲಕ 379 ರನ್ ಪೇರಿಸಿ ದಾಖಲೆ ಬರೆದಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ (ಮಂಗಳವಾರ) 240 ರನ್ ಗಳಿಸಿದ್ದ ಪೃಥ್ವಿ ಶಾ, ದ್ವಿತೀಯ ದಿನ ಬುಧವಾರ ಆಟ ಮುಂದುವರಿಸಿ ಕೇವಲ 99 ಎಸೆತಗಳಲ್ಲಿ 139 ರನ್ ಗಳಿಸಿ ತ್ರಿಶಕ ಪೂರ್ತಿಗೊಳಿಸಿದರು. ಒಟ್ಟಾರೆ ಪೃಥ್ವಿ ಶಾ 383 ಎಸೆತಗಳಲ್ಲಿ 379 ರನ್ ಗಳಿಸಿ ಔಟಾದರು. ಅವರ ಈ ಸ್ಫೋಟಕ ಇನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಮತ್ತು 49 ಬೌಂಡರಿಗಳು ಸಿಡಿಯಿತು.
ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಎರಡನೇ ಅತಿ ಹೆಚ್ಚಿನ ಮೊತ್ತವಾಗಿದೆ. 1948ರಲ್ಲಿ ಮಹಾರಾಷ್ಟ್ರದ ಭಾವುಸಾಹೇಬ್ ನಿಂಬಾಳ್ಕರ್ ಅಜೇಯ 443 ರನ್ ಗಳಿಸಿರುವುದು ದಾಖಲೆಯಾಗಿದೆ. ಮೂರನೇ ಸ್ಥಾನದಲ್ಲಿ ಸಂಜಯ್ ಮಂಜ್ರೇಕರ್(377 ರನ್) ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ 191 ರನ್ ಗಳಿಸಿದರು. ರಹಾನೆ ಮತ್ತು ಪೃಥ್ವಿ ಶಾ ಬ್ಯಾಟಿಂಗ್ ಸಾಹಸದಿಂದ ಮುಂಬೈ ತಂಡ 4 ವಿಕೆಟ್ ನಷ್ಟಕ್ಕೆ 687 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಗುರಿ ಬೆನ್ನಟ್ಟುತ್ತಿರುವ ಅಸ್ಸಾಂ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.
ಇದನ್ನೂ ಓದಿ | ವಿಸ್ತಾರ Explainer | ದೇಶಿ ಕ್ರಿಕೆಟ್ನ ರಾಜ ರಣಜಿ ಟ್ರೋಫಿಯ ಆರಂಭ ಎಲ್ಲಿಂದ? ಕರ್ನಾಟಕದ ಸಾಧನೆಯೇನು? ಇಲ್ಲಿದೆ ಮಾಹಿತಿ